ಮನೆ ಬಾಡಿಗೆ ಕೊಡುವ ಮೊದಲು ಎಚ್ಚರ – ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖತರ್ನಾಕ್ ಜೋಡಿಯಿಂದ ಕಳ್ಳತನ…

85
firstsuddi

ಬೆಂಗಳೂರು: ನಗರದಲ್ಲಿ ಮನೆ ಬಾಡಿಗೆಗೆ ಕೊಡುವ ಮುನ್ನ ಮನೆ ಮಾಲೀಕರು ಎಚ್ಚರ ವಹಿಸಬೇಕು. ಏಕೆಂದರೆ ಇಲ್ಲೊಂದು ಖತರ್ನಾಕ್ ಜೋಡಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ ಇದ್ದುಕೊಂಡು ಮನೆ ದೋಚಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್‌ನಲ್ಲಿ ನಡೆದಿದೆ.

ಲಿಖಿತಾ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಈ ಖತರ್ನಾಕ್ ಜೋಡಿ ತಾವು ಬಾಡಿಗೆಗೆ ಇದ್ದ ಮಾಲೀಕರ ಮನೆಯಲ್ಲೇ ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.

ಆರೋಪಿಗಳಾದ ಲಿಖಿತಾ, ಸುಮಂತ್, ಎಜಿಎಸ್ ಬಡಾವಣೆಯ ಪ್ರೇಮಲತಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಜಾಸ್ತಿ ಬರುತ್ತೆ ಅಂತಾ ಲಿವಿಂಗ್ ರಿಲೇಷನ್‌ನಲ್ಲಿರಲು ಮಾಲೀಕರು ಅನುಮತಿಸಿದ್ದರು. ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಾಲೀಕರ ಚಲನವಲನ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳ ಬಳಿಕ ದರೋಡೆ ಮಾಡಿದ್ದಾರೆ. ಆರೋಪಿಗಳ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿನ್ನಾಭರಣಗಳನ್ನು ಕದ್ದು ಮಾರಾಟ ಮಾಡಿದ್ದ ಜೋಡಿ, ಬೆಂಗಳೂರಿನಿಂದ ಎಸ್ಕೇಪ್ ಆಗಿ ಶಿವಮೊಗ್ಗದಲ್ಲಿ ಸೆಟಲ್ ಆಗಿತ್ತು. ಕೈಯಲ್ಲಿದ್ದ ಹಣ ಖಾಲಿಯಾಗಿ ಮತ್ತೊಂದು ಕಡೆ ಕೃತ್ಯವೆಸಗಲು ಈ ಜೋಡಿ ಸಿದ್ಧವಾಗಿತ್ತು. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಜೋಡಿ ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.