ಹಾವೇರಿ : ಮಹಿಳೆ ಬಾಯಿಂದ ಮಣ್ಣಿನ ಗೊಂಬೆಗಳು ಹಾಗೂ ಕೂದಲು ಬೀಳುತ್ತಿರುವ ಅಚ್ಚರಿಯ ಘಟನೆ ಜಿಲ್ಲೆಯ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಸುನಂದಾ ಗೋಂದ್ಕರ ಎಂಬ ಮಹಿಳೆಯ ಬಾಯಿಂದ ಕಳೆದ ನಾಲ್ಕು ತಿಂಗಳಿನಿಂದ ಕೂದಲು, ಮಣ್ಣಿನ ಗೊಂಬೆಗಳು, ಕಬ್ಬಿಣದ ಮೊಳೆ ಪ್ರತಿನಿತ್ಯ ಬೀಳುತ್ತಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದು, ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ಏನು ತೊಂದರೆ ಇಲ್ಲ ಎಂದು ಹೇಳಿದ್ದರು. ಆದರೆ ಮತ್ತೆ ಮನೆಗೆ ಹೋದ ಮೇಲೆ ಬಾಯಿಂದ ವಸ್ತುಗಳು ಬರುತ್ತಿದ್ದು, ಈ ಬೆಳವಣಿಗೆಯಿಂದ ಆತಂಕಗೊಂಡ ಕುಟುಂಬಸ್ಥರು ಹಿರೇಕೆರೂರು ತಾಲ್ಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿರುವ ಶಿವಲಿಂಗಬಸವೇಶ್ವರ ಮಠದ ಮೂಕಪ್ಪ ಸ್ವಾಮಿಗಳ ಮೊರೆ ಹೋಗಿದ್ದಾರೆ. ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆಯುತ್ತಿರುವ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದ್ದು, ಸದ್ಯ ದಿನಕ್ಕೆ ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆ ಬಾಯಿಂದ ಮಣ್ಣಿನ ಗೊಂಬೆ ಹಾಗೂ ಕೂದಲು ಬರುತ್ತಿರುವುದನ್ನು ಕಂಡ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದು, ಮಹಿಳೆಗೆ ಯಾರೋ ವಾಮಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.










