ಬೆಂಗಳೂರು : ಮಾಂಡೌಸ್ ಚಂಡಮಾರುತದ ಪರಿಣಾಮದಿಂದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲೂ ಇಂದಿನಿಂದ ಡಿ. 13ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡಿಸೆಂಬರ್ 13 ರವರೆಗೆ ಹಳದಿ ಅಲರ್ಟ್ ಘೋಷಿಸಿದೆ.
ತಮಿಳುನಾಡಿನ ಉತ್ತರ ಕರಾವಳಿ, ಪುದುಚೇರಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಆಂಧ್ರಪ್ರದೇಶದ ದಕ್ಷಿಣ ಕರಾವಳಿ, ತಮಿಳುನಾಡಿನ ಉತ್ತರ ಒಳನಾಡು ಮತ್ತು ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.
ಮಾಂಡೌಸ್ ಚಂಡಮಾರುತ ಕಳೆದ 6 ಗಂಟೆಗಳಲ್ಲಿ 11 ಕಿಮೀ ವೇಗದಲ್ಲಿ ಸುಮಾರು ಪಶ್ಚಿಮ ವಾಯುವ್ಯಕ್ಕೆ ಚಲಿಸಿದೆ. ಶ್ರೀಹರಿಕೋಟಾದಲ್ಲಿ ಈ ಚಂಡಮಾರುತ ಇಂದು ಮಧ್ಯರಾತ್ರಿ ಗಂಟೆಗೆ 65-75 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ, ಬೆಂಗಳೂರಿನಲ್ಲಿ ಭಾನುವಾರದವರೆಗೆ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಲಾಗಿದೆ.










