ಬೆಳಗಾವಿ : ಮಾಜಿ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿಯವರು(90) ಇಂದು ಬೆಳಗ್ಗೆ ಕೆ.ಕೆ.ಕೊಪ್ಪ ಗ್ರಾಮದಲ್ಲಿ ವಿಧಿವಶರಾಗಿದ್ದಾರೆ.
ಸೋಮವ್ವ ಅಂಗಡಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಐವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಇದ್ದರು. ಸುರೇಶ ಅಂಗಡಿ ಅವರ ಮೇಲೆ ಅತ್ಯಂತ ಪ್ರೀತಿ ಹೊಂದಿದ್ದ ಸೋಮವ್ವ, ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಮಾನಸಿಕವಾಗಿ ಕುಗ್ಗಿದ್ದರು. ಸುರೇಶ್ ಅಂಗಡಿ ಅವರು ನಿಧನ ಹೊಂದಿ ಆರೇ ತಿಂಗಳಲ್ಲಿ ಅವರ ತಾಯಿ ಸೋಮವ್ವ ಕೂಡ ಇಹಲೋಕ ತ್ಯಜಿಸಿದ್ದಾರೆ.
ಇಂದು ಸಂಜೆ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಸೋಮವ್ವ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಸಚಿವ ಜಗದೀಶ್ ಶೆಟ್ಟರ್ ಆಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.










