ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ.

30

ನವದೆಹಲಿ: ಆಧುನಿಕ ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನ ಎತ್ತರಕ್ಕೆ ಏರಿಸಿದ್ದ ಆರ್ಥಿಕ ತಜ್ಞರಾದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ 9.51ಕ್ಕೆ ನಿಧನರಾಗಿದ್ದು, ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯಕರ್ಶಿ ಕೆ.ಸಿ ವೇಣುಗೋಪಾಲ್ ಅವರು ಮಾತನಾಡುತ್ತ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಶನಿವಾರ ನಡೆಯಲಿದೆ ಎಂದು ಹೇಳಿದರು. ಈ ಕುರಿತು ಅಧಿಕೃತ ವರದಿಯನ್ನು ಇಂದು ತಿಳಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ನಾಯಕರಾದ ಡಾ. ಮನಮೋಹನ್ ಸಿಂಗ್ ಅವರ ನಿಧನ ದೇಶಕ್ಕಾಗಿರುವ ದೊಡ್ಡ ನಷ್ಟ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. “ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮತ್ತು ದೇಶದ ನಿಜವಾದ ಮಾದರಿ ವ್ಯಕ್ತಿಯಾಗಿದ್ದರು. ಅವರ ಧ್ಯೇಯ ಮತ್ತು ದೇಶವನ್ನು ಆಳುವ ಸಾಮರ್ಥ್ಯ ಎಲ್ಲರಿಗೂ ಸಾಕ್ಷಿಯಾಗಿತ್ತು ಎಂದು ಹೇಳಲಾಗುತ್ತಿದೆ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಡಿ.28 ರಂದು ನಡೆಯಲಿರುವ ಕಾಂಗ್ರೆಸ್ ಸಂಸ್ಥಾಪನಾ ದಿನ ಸೇರಿದಂತೆ 7 ದಿನಗಳ ವರೆಗೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ನಿಧನರಾದ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಏಮ್ಸ್ ನಿಂದ ಗುರುವಾರ ತಡರಾತ್ರಿ ಅವರ ನಿವಾಸಕ್ಕೆ ತಲುಪಿದೆ. ಹಾಗೂ ಇಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಇಂದು ಸಚಿವ ಸಂಪುಟ ಸಭೆ ಕರೆದಿದ್ದು, ಏಳು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಹಾಗೂ ದಿನದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಮಾಡಲು ನಿರ್ಧರಿಸಿದೆ ಎಂದು ವರದಿ ತಿಳಿದುಬಂದಿದೆ.