ಬೆಂಗಳೂರು : ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ಮಿನಿ ವಿಧಾನಸೌಧ ಹೆಸರನ್ನು ಬದಲಾಯಿಸಿ ‘ತಾಲೂಕು ಆಡಳಿತ ಸೌಧ’ ಎಂದು ಮರುನಾಮಕರಣ ಮಾಡಲಾಗಿದೆ.
ತಾಲ್ಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ , ನಾಡು – ನುಡಿ ಸಂಸ್ಕೃತಿಗೆ ಪೂರಕವಾಗಿ ‘ಮಿನಿವಿಧಾನಸೌಧ’ ಎಂಬ ನಾಮಾಂಕಿತದ ಬದಲು ‘ತಾಲ್ಲೂಕು ಆಡಳಿತ ಸೌಧ’ ಎಂದು ನಾಮಾಂಕಿತಗೊಳಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿನ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳೊಂಡಂತೆ ಇತರೆ ಸರ್ಕಾರಿ ಕಛೇರಿಗಳು ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪುಸ್ತುತ ಇರುವ ಮಿನಿ ಎಂಬ ಪದ ಆಂಗ್ಲ ಭಾಷೆಯಾಗಿದ್ದು, ತಾಲ್ಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ ಕಾಯಿದೆ – ಕಾನೂನುಗಳನ್ನಾಗಲೀ ರೂಪಿಸುವ ಶಕ್ತಿಕೇಂದ್ರಗಳಲ್ಲದ ಕಾರಣ ಮಿನಿ ವಿಧಾನಸೌಧ ‘ ಎಂಬುದರ ಬದಲಾಗಿ ‘ ತಾಲ್ಲೂಕು ಆಡಳಿತ ಸೌಧ ‘ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರು ಮತ್ತು ಗಣ್ಯ ವ್ಯಕ್ತಿಗಳು ಕೋರಿದ್ದರು.










