ಮೈಸೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಿಲ್ಡರ್ ಮನೆ ಹಾಗೂ ಕೆಲ ಆಫೀಸ್‍ಗಳ ಮೇಲೆ ಮೈಸೂರಿನಲ್ಲಿ ಇಂದು ದಾಳಿ ಮುಂದುವರೆದಿದೆ. ಈ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ದಾಳಿ ನಡೆಸಿತ್ತು. ಸೋಮವಾರ ಬೆಳಗ್ಗೆ 8 ಗಂಟೆಗೆ ಐದು ಜನ ಇಡಿ ಅಧಿಕಾರಿಗಳ ತಂಡ ಮೈಸೂರು ನಗರದ ಇನ್ಕಲ್‍ನಲ್ಲಿರುವ ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ ಅವರನ್ನ ತನಿಖೆಗೆ ಒಳಪಡಿಸಿ ಕೆಲವು ದಾಖಲೆಗಳನ್ನ ಪರಿಶೀಲನೆ ನಡೆಸಿತು.
ಮುಡಾದ 50:50 ಅನುಪಾತದಲ್ಲಿ 98 ಸಾವಿರ ಚದರ ಅಡಿ ಜಾಗವನ್ನ ಒಂದೇ ಬಾರಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ರಾಕೇಶ್ ಪಾಪಣ್ಣ ವಿರುದ್ಧ ಶಾಸಕ ಶ್ರೀವತ್ಸ ಆರೋಪ ಮಾಡಿ, ದಾಖಲಾತಿ ಬಿಡುಗಡೆ ಮಾಡಿದ್ದರು. ಇದರ ಜತೆಗೆ ದೂರುದಾರ ಸ್ನೇಹಮಯಿ ಕೃಷ್ಣ ಈ ಸಂಬಂಧ ದಾಖಲಾತಿಗಳನ್ನ ಜಾರಿ ನಿರ್ದೇಶನಾಲಯಕ್ಕೆ ನೀಡಿ, ಮುಡಾದ ಹಿಂದಿನ ಆಯುಕ್ತರ ಮೇಲು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಮುಡಾ ಹಗರಣದ ತನಿಖೆಯಲ್ಲಿ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಪಡೆದು, ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಇಳಿದಿರುವ ಇಡಿ, ನಿನ್ನೆ ರಾತ್ರಿ 11 ಗಂಟೆಗೆ ಮೈಸೂರಿನ ನ್ಯೂ ಕಾಂತ್ ರಾಜ್ ಅರಸ್ ರಸ್ತೆಯಲ್ಲಿರುವ ಜಯರಾಮು ಎಂಬುವವರಿಗೆ ಸೇರಿದ ಕಚೇರಿ ಹಾಗೂ ಅವರ ಶ್ರೀರಾಂಪುರದಲ್ಲಿರುವ ಮನೆಯ ಮೇಲೆ ದಾಳಿ ಮುಂದುವರೆಸಿದೆ. ಮೈಸೂರಿನ ಹಲವು ಬಿಲ್ಡರ್‍ಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಆಪ್ತರ ಬಗ್ಗೆ ಇಡಿಗೆ ಮುಡಾ ದಾಳಿಯ ಸಂದರ್ಭದಲ್ಲಿ ಪ್ರಮುಖ ದಾಖಲೆಗಳು ದೊರೆತಿವೆ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ಮೈಸೂರಿನಲ್ಲಿ ತನಿಖೆ ಮುಂದುವರೆಸಿದ್ದು, ಇನ್ನೂ ಹಲವು ಬಿಲ್ಡರ್ ಕಚೇರಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.










