ಧಾರವಾಡ: ದೇಶಾದ್ಯಂತ ವಕ್ಫ್ ಕಾಯ್ದೆಯ ಬಿಸಿ ಸದ್ದು ಮಾಡುತ್ತಿದೆ ಇದೆ ಹಿನ್ನಲೆಯಲ್ಲಿ ಇಗ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮಕ್ಕೂ ತಟ್ಟಿದೆ. ಈ ಗ್ರಾಮದ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ವಕ್ಫ್ ಹೆಸರು ದಾಖಲಾಗಿರುವುದು ಕಂಡು ಬಂದಿದೆ. ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರುವ ರೈತರ ಹೊಲಗಳ ಪಹಣಿಯ 11ನೇ ಇತರ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ‘ಸದರಿ ಜಮೀನು ವಕ್ಫ್ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ದಾಖಲಾಗಿದೆ. ತಮ್ಮ ಪಿತ್ರಾರ್ಜಿತ ಆಸ್ತಿಯಾದ ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ದಾಖಲಾಗಿರುವುದು ಸಂಬಂಧಪಟ್ಟ ರೈತರಿಗೆ ನಡುಕ ಉಂಟುಮಾಡಿದೆ.
ಉಪ್ಪಿನಬೆಟಗೇರಿ ಗ್ರಾಮದ ಸರ್ವೆ ನಂಬರ್ 20 ರಲ್ಲಿ ಕೃಷಿಕರಾದ ಮರಬಸಪ್ಪ ತಂದೆ ಮಲ್ಲಪ್ಪ ಮಸೂತಿ ಹಾಗೂ ಶ್ರೀಶೈಲ ತಂದೆ ಮಲ್ಲಪ್ಪ ಮಸೂತಿ ಇವರ ಜಮೀನಿನ 3 ಎಕರೆ 13 ಗುಂಟೆಯ ಜಂಟಿ ಪಹಣಿಯಲ್ಲಿ ಹಾಗೂ ಸರ್ವೆ ನಂಬರ್ 141 ರ ಹಿಸ್ಸಾ 2 ರಲ್ಲಿ ಜವಳಗಿ ಬಾಳಪ್ಪ ರುದ್ರಪ್ಪ ಇವರ ಹೆಸರಿನ 26 ಗುಂಟೆ, ಇದೇ ಸರ್ವೆ ನಂಬರಿನ ಹಿಸ್ಸಾ 3 ರಲ್ಲಿ ಜವಳಗಿ ಸರೋಜಾ ಕರಬಸಪ್ಪ ಇವರ ಹೆಸರಿನ 2 ಎಕರೆ 12 ಗುಂಟೆ ಮತ್ತು ಹಿಸ್ಸಾ 4 ರಲ್ಲಿ ಜವಳಗಿ ಗಂಗಪ್ಪ ರುದ್ರಪ್ಪ ಇವರ ಹೆಸರಿನ 3 ಎಕರೆ 21 ಗುಂಟೆ ಜಮೀನಿನ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ದಾಖಲಾಗಿದೆ. ಇದನ್ನು ನೋಡಿದ ರೈತರು ಮುಂದೇನು ಮಾಡಬೇಕು ಎಂದು ತೋಚದೇ ಕಂಗಾಲಾಗಿದ್ದಾರೆ.










