ಧಾರವಾಡ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್‍ಗೆ ಇಡಿ ಸಮನ್ಸ್‍ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇಡಿ ನೀಡಿರುವ ಸಮನ್ಸ್ ರದ್ದುಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್‍ಗೆ ತಾತ್ಕಾಲಿಕ ರಿಲೀಫ್ ನೀಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಹತ್ತು ದಿನಗಳ ಕಾಲ ಸಿಎಂ ಪತ್ನಿ ಮತ್ತು ಬೈರತಿ ಸುರೇಶ್ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಆದೇಶ ಪ್ರಕಟಿಸಿದರು. ಫೆಬ್ರವರಿ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದ್ದು ಅಲ್ಲಿಯವರೆಗೆ ಇಬ್ಬರಿಗೂ ಮಧ್ಯಂತರ ರಕ್ಷಣೆ ಮುಂದುವರಿಯಲಿದೆ. ಮೊದಲು ಸಚಿವ ಬೈರತಿ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಬೈರತಿ ಸುರೇಶ್ 2023ರ ಜೂನ್‍ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಇಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಎಲ್ಲರ ಮಾಹಿತಿಯನ್ನು ಬ್ಯಾಂಕ್ ಡಿಟೈಲ್ಸ್ ಕೊಡಬೇಕೆಂದು ಇಡಿ ಕೇಳುತ್ತಿದೆ. ಸುರೇಶ್ ಗೂ ಈ ಪ್ರಕರಣ ಯಾವುದೇ ಸಂಬಂಧ ಇಲ್ಲ. ಪ್ರಕರಣದಲ್ಲಿ ಅವರು ಆರೋಪಿಯೂ ಅಲ್ಲ, ಆದರೂ ಕೂಡ ಇಡಿ ಸಮನ್ಸ್ ನೀಡಿದೆ. ಹೀಗಾಗಿ ಕೋರ್ಟ್ ಗೆ ಬಂದಿದ್ದೇವೆ ಎಂದು ವಾದ ಮಂಡಿಸಿದರು. ಇತ್ತ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ವಾದ ಮಂಡಿಸಿದ ಸಂದೇಶ್ ಚೌಟ, ಈ ಪ್ರಕರಣದಲ್ಲಿ ಅಪರಾಧದಿಂದ ಗಳಿಸಿದ ಹಣವಿಲ್ಲ. ಸೈಟ್‍ಗಳನ್ನು ವಾಪಸ್ ಮಾಡಲಾಗಿದೆ. ಅಕ್ರಮ ಹಣ ವಗಾರ್ವಣೆ ಪ್ರಶ್ನೆಯೇ ಬರುವುದಿಲ್ಲ. ಅಕ್ರಮ ಹಣದ ಗಳಿಕೆಯಿದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಆದರೆ ನಟೇಶ್ ಪ್ರಕರಣದಲ್ಲಿ ಇಡಿಯ ದಾಳಿ ಮತ್ತು ಸೀಜ್ ರದ್ದುಪಡಿಸಿದೆ. ಇಡಿ ಕಾನೂನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ವಾದ ಮಂಡಿಸಿದರು.










