ಮುಳುಗದಿರಲೀ ಬದುಕು….ಕುಸಿಯದಿರಲೀ ಭರವಸೆ….

281
firstsuddi

ಬಿಡದೇ ಸುರಿದ ಆಶ್ಲೇಶ ಮಳೆಗೆ ನಮ್ಮ ಕರ್ನಾಟಕ ರಾಜ್ಯ ಹಾಗೂ ನೆರೆ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರ ಜನತೆ ತತ್ತರಿಸಿ ಹೋಗಿದ್ದಾರೆ. ಹಿರಿಯರು ಹಾಗೂ ಅನುಭವಿಗಳು 70 ವರ್ಷಗಳ ಹಿಂದೆ ಈ ಪರಿಯ ಮಳೆ ನೋಡಿದ್ದೆವು. ಆದರೆ ಈ ವರ್ಷದ ಹಾಗೆ ಪ್ರವಾಹವಾಗಲೀ, ಭೂಕುಸಿತವಾಗಲೀ ಸಂಭವಿಸಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಜ ಹಲವು ನದಿಗಳ ಉಗಮ ಸ್ಥಾನವಾಗಿರುವ ಕರ್ನಾಟಕದಲ್ಲಿಂದು ಮೈದುಂಬಿ ಹರಿಯುತ್ತಿರುವ ನದಿಗಳ ರೌದ್ರ ನರ್ತನ ಕೆಲವು ದಿನಗಳ ಹಿಂದಷ್ಟೇ ಮಳೆಯೇ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಉತ್ತರ ಕರ್ನಾಟಕ ರೈತರು ಇಂದು ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣೆಯರ ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆ, ಮಠ, ಜಾನುವಾರು, ಕೃಷಿಭೂಮಿ ಎಲ್ಲವನ್ನೂ ಕಳೆದುಕೊಂಡು ಮುಂದೇನು ಎಂದು ತೋಚದೆ ಗಂಜಿಕೇಂದ್ರಗಳಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು ಜೀವಧಾರೆಯಾಗಿರುವ ನದಿಯೊಡಲು ಎಷ್ಟೋ ಜೀವಗಳನ್ನು ತನ್ನೊಂದಿಗೆ ಸೆಳೆದೊಯ್ದಿದೆ. ನೂರಾರು ಹಳ್ಳಿಗಳು ನದಿತೀರ ಪ್ರದೇಶಗಳು ಇಂದು ಅಕ್ಷರಶಹ ಜಲದಿಗ್ಬಂಧನದಲ್ಲಿ ನಲುಗುತ್ತಿದೆ.
ಮುಂಗಾರಿಗೆ ಹಸಿರುಟ್ಟು ನಲಿಯುತ್ತಿದ್ದ ಮಲೆನಾಡಿನಲ್ಲಿಂದು ನೀರವ ಮೌನ ತುಂಗಾಭದ್ರೆ, ಹೇಮಾವತಿಯರು ಕೂಡಿ ತಮ್ಮ ತೀರವನ್ನು ಆಪೋಶಿಸಿಕೊಂಡು ಸಾವಿರಾರು ಮಂದಿಯನ್ನು ನಿರ್ಗತಿಕರನ್ನಾಗಿ ಮಾಡಿವೆ. ಇದರೊಂದಿಗೆ ಕಳೆದ ಬಾರಿ ಮಂಜಿನ ನಗರ ಕೊಡಗನ್ನು ತತ್ತರಿಸುವಂತೆ ಮಾಡಿದ್ದ ಭೂಕುಸಿತ ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ಸಂಭವಿಸಿದ್ದು, ಹತ್ತಾರು ಜೀವಗಳನ್ನು, ನೂರಾರು ಎಕರೆ ಕೃಷಿಭೂಮಿ, ಮನೆಗಳನ್ನು ಹೇಳಹೆಸರಿಲ್ಲದಂತಾಗಿಸಿದೆ.
ಬಿಡದೇ ಸುರುದ ಮಳೆ ಮೂಡಿಗೆರೆಯ ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ, ಬಾಳೂರು ಹೊರಟ್ಟಿ, ಹಲಗಟ್ಟಿ ಗ್ರಾಮಗಳಲ್ಲಿ ನಿರಂತರ ಭೂಕುಸಿತಕ್ಕೆ ಕಾರಣವಾಯಿತು. ನೋಡ ನೋಡುತ್ತಿದ್ದಂತೆ 20ಕ್ಕೂ ಹೆಚ್ಚು ಮನೆಗಳು ಗುಡ್ಡಗಳು ಕುಸಿದಂತೆಲ್ಲ ನಿರ್ನಾಮವಾದವು. ದುರ್ದೈವವಶಾತ್ ಬಾಳೂರು ಹೊರಟ್ಟಿ ಎಂಬಲ್ಲಿ ಗುಡ್ಡ ಕುಸಿತದಿಂದ ತಾಯಿ ಮಗ ಸಾವನ್ನಪ್ಪಿದ್ದು ಸುರಿವ ಮಳೆಯಲ್ಲಿ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಣ್ಣು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆದರೂ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದ್ದ ಸ್ಥಳದಿಂದ ಮೃತದೇಹಗಳನ್ನು ಸಾಗಿಸಲಾರದೇ ಸಂಬಂಧಿಕರು ಪರದಾಡಿದ ದೃಶ್ಯ ಮನಕಲುಕುವಂತಿತ್ತು. ನಿರಂತರವಾಗಿ ಕುಸಿಯುತ್ತಲೇ ಇದ್ದ ಗುಡ್ಡಗಳು, ಬಿಡದೇ ಸುರಿಯುತ್ತಿದ್ದ ಮಳೆ ಇದರ ನಡುವೆಯೂ ಜೀವದ ಹಂಗು ತೊರೆದು ಸ್ವಯಂಸೇವಕರು, ಅಗ್ನಿಶಾಮಕ ಸಿಬ್ಬಂದಿ, NDRF ತಂಡ ಹಾಗೂ ನಮ್ಮ ಹುಡುಗರ ವಾಟ್ಸ್ ಅಪ್ ಗ್ರೂಪ್ ತಂಡ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದ್ದು ನಿಜಕ್ಕೂ ಶ್ಲಾಘನೀಯ. ಕಳಸದ ಗ್ರಾಮವೊಂದರಲ್ಲಿ ಭೂಕುಸಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಮಾರ್ಗವಿಲ್ಲದೇ ಸ್ಥಳೀಯರೇ ಆಕೆಯನ್ನು 10 ಕಿ.ಮೀ ದೂರದವರೆಗೆ ಹೊತ್ತು ತಂದು ಚಿಕಿತ್ಸೆ ಕೊಡಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದು ಸ್ಥಳೀಯರ ಸಮಯ ಪ್ರಜ್ಞೆ ಮತ್ತು ಸಹಾಯ ಮಾಡುವ ಮನೋವೃತ್ತಿಗೆ ಹಿಡಿದ ಕನ್ನಡಿಯಂತಿತ್ತು.
“ರಾಕ್ಷಸ ಮಳೆ”, “ಜಲಾಸುರ” ಎಂದೆಲ್ಲಾ ಇಂದು ನಾವು ಮಳೆಯನ್ನು ನಿಂದಿಸುತ್ತಿದ್ದೇವೆಯೇ ಹೊರತು, ನಾವೆಲ್ಲ ತಪ್ಪಿದ್ದೇವೆ ಎನ್ನುವ ಆತ್ಮಾವಲೋಕನಕ್ಕೆ ಯಾರೂ ತಯಾರಿಲ್ಲ. ನಮ್ಮವರೇ ಆದ ಖ್ಯಾತ ಲೇಖಕ, ಪರಿಸರವಾದಿ ಪೂರ್ಣಚಂದ್ರ ತೇಜಸ್ವಿಯವರ ಮಾತಿನಂತೆ ನಾವು ಪ್ರಕೃತಿಯ ಒಂದು ಭಾಗವಷ್ಟೇ, ನಮಗೆ ಪ್ರಕೃತಿಯ ಅಗತ್ಯವಿದೆ. ಆದರೆ ಪ್ರಕೃತಿಗೆ ಮನುಕುಲದಿಂದ ಯಾವುದೇ ಕೊಡುಗೆಯಾಗಲೀ, ಅಗತ್ಯವಾಗಲೀ ಇಲ್ಲ. ನಮ್ಮ ಇಂದಿನ ಪರಿಸ್ಥಿತಿಗೆ ನಾವೇ ಹೊಣೆಗಾರರು ಎನ್ನುವುದು ಪರಿಸರವಾದಿಗಳ ಕೂಗು. ನಿಜ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆ ನಮ್ಮ ಈ ದುಃಸ್ಥಿತಿಗೆ ಕಾರಣ. ಹಿಂದೆಯೂ ಹೀಗೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ತನ್ನದೇ ಲಯವಿತ್ತು. ಸಿಡಿಲ್ಮಿಂಚುಗಳೊಂದಿಗೆ ಸಕಾಲದಲ್ಲಿ ಅಡಿಯಿಡುತ್ತಿದ್ದ ಮುಂಗಾರು ಎಷ್ಟೇ ಆರ್ಭಟಿಸಿದರೂ ಅದು ಪ್ರಕೃತಿಯ ನೈಜ ಕಾವ್ಯದಂತೆ ತೋರುತ್ತಿತ್ತು. ಆದರೆ ಇಂದು ಮುಂಗಾರು ಬಂತೆಂದರೆ ಬಂತು ಇಲ್ಲಾವದರೆ ಇಲ್ಲ. ಮೂಡಿಗೆರೆಯಲ್ಲಿ ಮಳೆ ಬಂದರೆ, ಬಣಕಲ್‍ನಲ್ಲಿ ಬರುವುದಿಲ್ಲ. ಪ್ರಕೃತಿಯ ಸಹಜ ಆಗುಹೋಗುಗಳು ಮಾನವನ ಅತಿರೇಕದ ಚಟುವಟಿಕೆಗಳಿಂದ ಎಷ್ಟು ಪ್ರಭಾವಿಸಲ್ಪಟ್ಟಿದೆಯೆಂದರೆ ಅದಕ್ಕೆ ಉದಾಹರಣೆ ನಮ್ಮ ಇಂದಿನ ಪರಿಸ್ಥಿತಿ. ನಾವು ಇಂದು ಸಿಕ್ಕಸಿಕ್ಕಲ್ಲೆಲ್ಲಾ ಕಾಡು ಕಡಿದು, ಗುಡ್ಡಗಳನ್ನು ಮಟ್ಟಸವಾಗಿಸಿ ನಮ್ಮ ಅನುಕೂಲತೆಗಳಿಗೆ ತಕ್ಕಂತೆ ಪರಿವರ್ತಿಸಿಕೊಂಡಾಗಿದೆ. ಪರಿಣಾಮವೂ ಅಷ್ಟೇ ಭೀಕರವಾಗಿದೆ.
ಇನ್ನು ಕೆಲವು ವರ್ಷಗಳ ಹಿಂದೆಯೂ ಪ್ರವಾಹಕ್ಕೆ ತತ್ತರಿಸಿದ್ದ ಉತ್ತರ ಕರ್ನಾಟಕ ಈ ಬಾರಿಯೂ ನೆರೆಯಲ್ಲಿ ಕಚ್ಚಿಹೋಗಿದೆ. ಮೇಲ್ನೋಟಕ್ಕೆ ಇದು ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ನೀರಿನಿಂದ ಆಗಿರುವ ಪ್ರವಾಹ ಆದರೆ ನಮ್ಮ ಸರ್ಕಾರ ಹಾಗೂ ಆ ಭಾಗದ ರೈತರು ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದರೆ ಅನಾಹುತ ಈ ಪ್ರಮಾಣದಾಗಿರುತ್ತಿರಲಿಲ್ಲ.
ಮಳೆ ನೀರು ಸಂಗ್ರಹ ಮತ್ತು ಪ್ರವಾಹ ತಡೆಗೆ ಚೆಕ್‍ಡ್ಯಾಂಗಳು ಮತ್ತು ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿದ್ದಲ್ಲಿ ಭಾರಿ ಪ್ರಮಾಣದ ಪ್ರವಾಹ ತಡೆಗಟ್ಟಲು ಅಸಾಧ್ಯ ಎನಿಸಿದ್ದರೂ ಆರಂಭಿಕ ಹಂತದಲ್ಲಿ ಇದು ನೀರು ಹರಿದು ಹೋಗುವುದನ್ನು ತಡೆಹಿಡಿಯುತ್ತದೆ ಹಾಗೂ ಇದರಿಂದ ಅಂತರ್ಜಲ ಹೆಚ್ಚುತ್ತದೆ. ಇನ್ನಾದರೂ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ದೇಶದ ಹಲವು ರಾಜ್ಯಗಳಲ್ಲಿ ಮಳೆ ನೀರಿನ ಸಮರ್ಪಕವಾದ ಸಂಗ್ರಹ ಮತ್ತು ಇಂಗಿಸುವಿಕೆ ನಡೆಯುತ್ತಿದೆ. ನಮ್ಮಲ್ಲಿಯೂ ಈ ನಿಟ್ಟಿನಲ್ಲಿ ಪ್ರಮಾಣಿಕ ಹಾಗೂ ಅವಿರತ ಪ್ರಯತ್ನ ನಡೆದರೆ ಮುಂಬರುವ ಅನಾಹುತಗಳನ್ನು ಒಂದಷ್ಟು ತಡೆಗಟ್ಟಬಹುದು.
ಇಷ್ಟು ಮಳೆ ರಚ್ಚೆ ಹಿಡಿದಂತೆ ಬಂದರೂ ಪ್ರಕೃತಿಯ ಯಾವ ಭಾಗವೂ ಹಾನಿಗೊಳಗಾಗಿಲ್ಲ. ಆದರೆ ಮಾನವ ನಿರ್ಮಿತ ತೂಗು ಸೇತುವೆಗಳನ್ನು ಪ್ರವಾಹ ತುಂಡರಿಸಿದೆ. ಕಡಿದ ಗುಡ್ಡ ಬೆಟ್ಟಗಳನ್ನು ಬುಡಮೇಲಾಗಿಸಿದೆ, ನೆಟ್ಟಿ ತೋಟಗಳನ್ನು ಮುರಿದಿದೆ, ತನ್ನ ಹಾದಿಗೆ ಅಡ್ಡಬಂದ ಅಣೆಕಟ್ಟುಗಳನ್ನು ಕೊರೆದು ಮುಂದೆ ಸಾಗಿದೆ. ಈ ಬಾರಿಯೂ ಪ್ರಕೃತಿ ಮತ್ತು ಮುನುಕುಲದ ನಡುವಿನ ಮೇಲಾಟದಲ್ಲಿ ಪ್ರಕೃತಿಯೇ ಗೆದ್ದಿದೆ. ಇನ್ನಾದರೂ ನಾವು ಇದನ್ನು ಅರಿತು ನಡೆಯಬೇಕಿದೆ.ಸರ್ಕಾರ, ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಹಲವಷ್ಟು ಯೋಜನೆಗಳನ್ನು ಹಮ್ಮಿಕೊಂಡು ಮುಂದೆ ಬಂದೊದಗುವ ಅನಾಹುತಗಳ ಸರಮಾಲೆಯ ತೀವ್ರತೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲಾ ನಿರ್ವಹಿಸಬೇಕಿದೆ.