ಕೊಟ್ಟಿಗೆಹಾರ: ಮಲೆನಾಡಿನ ಭಾಗದ ಪ್ರಮುಖ ಜೀವನದಿ ಹೇಮಾವತಿಯಾಗಿದ್ದು, ನದಿ ಮೂಲದ ಅಭಿವೃದ್ದಿಗೆ ಹಿತ ರಕ್ಷಣಾ ಒಕ್ಕೂಟ ರಚನೆ ಮಾಡಿ ಅಭಿವೃದ್ದಿಗೆ ಶ್ರಮ ವಹಿಸಲಾಗುವುದು ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಹೇಳಿದರು.
ಬಾಳೂರಿನ ಸುವರ್ಣಗಿರಿಯಲ್ಲಿ ನಡೆದ ಹೇಮಾವತಿ ಉಗಮ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆನಾಡು ಹಾಗೂ ಬಯಲು ಸೀಮೆಯ ಆರು ಜಿಲ್ಲೆಗಳಿಗೆ ಈ ನದಿಯು ಉಪಯೋಗಕಾರಿಯಾಗಿದೆ. ಚಿಕ್ಕಮಗಳೂರು, ಹಾಸನ,ಕೊಡಗು, ತುಮಕೂರು, ಮಂಡ್ಯ ಹಾಗೂ ಮೈಸೂರು ಈ ಆರು ಜಿಲ್ಲೆಗಳ 15 ಜನರ ಒಕ್ಕೂಟವನ್ನು ಒಳಗೊಂಡ ತಂಡವನ್ನು ರಚಿಸಿ ನೋಂದಾಯಿಸಿ ಉಗಮ ಸ್ಥಾನದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಬೆಳೆಗಾರ ಡಿ.ಬಿ.ಸುಬ್ಬೇಗೌಡ ನೆರವೇರಿಸಿ ಮಾತನಾಡಿ, ದೇಶದಲ್ಲೇ ಒಂದು ಮಾದರಿ ನದಿಯಾಗುವ ರೀತಿ ಟ್ರಸ್ಟನ್ನು ಬೆಳೆಸಬೇಕು. ಇದು ನನ್ನ ಬಹು ದಿನದ ಕನಸಾಗಿತ್ತು ಎಂದರು.
ಹೇಮಧಾರೆ ಮಾಹಿತಿ ಪುಸ್ತಕವನ್ನು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಬಿಡುಗಡೆ ಮಾಡಿ ಮಾತನಾಡಿ, ಹೇಮೆಯ ಪ್ರಯೋಜನವನ್ನು ಹಾಸನ ಭಾಗದ ರೈತರು ಪ್ರಯೋಜನ ಪಡೆಯುತ್ತಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಇಂದಿನ ಪರಿಸ್ಥಿತಿಯಲ್ಲಿ ನದಿ ಮೂಲದ ರಕ್ಷಣೆ ಅತ್ಯಗತ್ಯವಾಗಿದೆ. ಒಕ್ಕೂಟದ ಮುಖಾಂತರ ಆರು ಜಿಲ್ಲೆಯ ರೈತರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶವಾಗಿದ್ದು, ಇದರಿಂದ ಮೂಡಿಗೆರೆ ತಾಲ್ಲೂಕಿನ ಪ್ರವಾಸೋಧ್ಯಮವೂ ಬೆಳವಣಿಗೆಯಾಗಲಿದೆ ಎಂದರು.
ಕೆ.ಆರ್.ಪೇಟೆಯ ರೈತ ಮುಖಂಡ ಕೃಷ್ಣೇಗೌಡ ಮಾತನಾಡಿ, ಈ ಹೇಮಾವತಿ ಉಗಮ ಸ್ಥಾನದ ಹಿತರಕ್ಷಣೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದ್ದು, ರಾಜ್ಯ ಮಟ್ಟದಲ್ಲಿ ಕಾವೇರಿ ಮಾದರಿಯಲ್ಲಿ ಮುಂದೆ ಹೇಮಾವತಿ ಅಭಿವೃದ್ದಿ ಪ್ರಾಧಿಕಾರ ಸರ್ಕಾರದಿಂದ ರಚಸಿದರೆ ಆರು ಜಿಲ್ಲೆಗಳ ಜನರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.
ಉಪನ್ಯಾಸಕರಾದ ಎಂ.ಎಸ್.ಅಶೋಕ್ ಸಂಸ್ಥೆಯು ಮುಂದೆ ಹಮ್ಮಿಕೊಳ್ಳಬಹುದಾದ 6 ಪ್ರಮುಖ ಅಭಿವೃದ್ದಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಹೆಚ್.ಪಿ.ದೇವರಾಜ್, ಕೆ.ಆರ್.ಪೇಟೆಯ ರೈತ ಮುಖಂಡ ಸುಬ್ಬೇಗೌಡ, ಬಿಸಿಎಸ್ ಕುಮಾರ್, ಧರ್ಮಕುಮಾರ್, ಜಾವಳಿಯ ಮುಖಂಡರಾದ ಎಂ.ವಿ.ಜಗದೀಶ್, ಚೆನ್ನಕೇಶವಗೌಡ, ಜೆ.ಜಿ.ಶಶಿಧರ್, ಆದರ್ಶ್‍ಬಾಳೂರು, ಶಿವಶರಣ್, ರವಿ ಮಲೆಮನೆ, ಬಿ.ಎಂ.ಸುರೇಶ್, ತಿಲಕ್, ಸುರೇಶ್ ಬಾಳೂರು, ಜಾವಳಿ ಹಾಗೂ ಬಾಳೂರು ಗ್ರಾಮಸ್ಥರು ಇದ್ದರು.










