ಕೊಟ್ಟಿಗೆಹಾರ : ವರ್ಷ ಕಳೆದರೂ ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ದಿಗೆ ಮುಂದಾಗದೇ ಇರುವುದರಿಂದ ಸಾರ್ವಜನಿಕರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು ಮತ್ತು ಕೊಟ್ಟಿಗೆಹಾರದಲ್ಲಿ ವರ್ತಕರು ಸಾಂಕೇತಿಕವಾಗಿ ಬಂದ್ ಮಾಡಿದ್ದರು.
ಕೊಟ್ಟಿಗೆಹಾರದ ಗೆಳೆಯರ ಬಳಗ, ವರ್ತಕರ ಸಂಘ, ಆಟೋ ಚಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾನುವಾರ ಬೆಳಿಗ್ಗೆ ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟ್ನಲ್ಲಿರುವ ಚಿಕ್ಕಮಗಳೂರು ಗಡಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ಚಾರ್ಮಾಡಿ ಘಾಟ್ ಕೆಳಭಾಗದ ಚಾರ್ಮಾಡಿ ಗ್ರಾಮದ ವರ್ತಕರು ಸಾರ್ವಜನಿಕರು ಚಾರ್ಮಾಡಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಸಾಗಿ ಚಿಕ್ಕಮಗಳೂರು ಗಡಿ ತಲುಪಿದರು.
ಕೊಟ್ಟಿಗೆಹಾರದಲ್ಲಿ ಭಾನುವಾರ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಕೊಟ್ಟಿಗೆಹಾರದ ವರ್ತಕರು ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ದಿಗೆ ಒತ್ತಾಯಿಸಿದರು.
ಚಾರ್ಮಾಡಿ ಘಾಟ್ನ ಚಿಕ್ಕಮಗಳೂರು ಗಡಿಯಲ್ಲಿ ಜಮಾಯಿಸಿದ ಸಾರ್ವಜನಿಕರು ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ದಿ ಪಡಿಸಬೇಕು ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೊಟ್ಟಿಗೆಹಾರ ಗೆಳೆಯರ ಬಳಗದ ಅಧ್ಯಕ್ಷ ಅಭಿಲಾಷ್, ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ದಿಯಾಗದೆ ಇರುವುದರಿಂದ ಈ ಮಾರ್ಗವಾಗಿ ಸರ್ಕಾರಿ ಬಸ್ ಸೇರಿದಂತೆ ಘನವಾಹನ ಸಂಚಾರ ನಿಷೇದಿಸಲಾಗಿದೆ. ಇದರಿಂದ ಕರಾವಳಿ ಭಾಗಕ್ಕೆ ಆಸ್ಪತ್ರೆಗೆಳಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರವಾಸಿಗರನ್ನು ನೆಚ್ಚಿಕೊಂಡು ವ್ಯಾಪಾರ ಮಾಡುತ್ತಿರುವ ಹೆದ್ದಾರಿ ಇಬ್ಬದಿಯ ವರ್ತಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಚಾರ್ಮಾಡಿ ಘಾಟ್ ಹೆದ್ದಾರಿ ಅಭಿವೃದ್ದಿ ಪಡಿಸಬೇಕು. ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಚಾರ್ಮಾಡಿ ಘಾಟ್ ಹೆದ್ದಾರಿ ಉಳಿಸಿ ಅಭಿಯಾನದ ಸಂಯೋಜಕ ಸಂಜಯಗೌಡ ಮಾತನಾಡಿ ಅಧಿಕಾರಿಗಳು ಶೀಘ್ರವಾಗಿ ಹೆದ್ದಾರಿ ಅಭಿವೃದ್ದಿಗೆ ಮುಂದಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ಉಜಿರೆಯವರೆಗೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಮೊದಲ ಹಂತವಾಗಿ ಸದ್ಯಕ್ಕೆ ಸರ್ಕಾರಿ ಬಸ್ ಸಂಚಾರಕ್ಕೆ ಅವಖಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರೆಲ್ಲರೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮುನಿರಾಜು ಅವರು ಕಾಲ್ನಡಿಗೆಯಲ್ಲಿ ಬಂದಿದ್ದ ಸಾರ್ವಜನಿಕರೊಡನೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಅವರು 19.3 ಕೋಟಿ ರೂ ವೆಚ್ಚದಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ 6 ತಡೆಗೋಡೆ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು ಈ ತಿಂಗಳ 5 ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚಾರ್ಮಾಡಿ ಘಾಟ್ ಹೆದ್ದಾರಿ ಡಾಂಬಾರೀಕರಣ ಕಾಮಗಾರಿ ಆರಂಭಿಸಿ ಮಳೆಯ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಕಡಿಮೆಯಾದ ನಂತರ ಡಾಂಬಾರೀಕರಣ ನಡೆಯಲಿದೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳೊಡನೆ ಮಾತುಕತೆ ನಡೆಸಿ ಕೆಲದಿನಗಳಲ್ಲಿ ಸರ್ಕಾರಿ ಬಸ್ ಸಂಚಾರ ಆರಂಬಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾಋದ ಕಿರಿಯ ಇಂಜಿನಿಯರ್ ಸಂತೋಷ್, ಕೊಟ್ಟಿಗೆಹಾರ ವರ್ತಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ಪೈ, ಕಾರ್ಯದರ್ಶಿ ಟಿ.ಎಂ ಗಜೇಂದ್ರ, ಗೆಳೆಯರ ಬಳಗದ ಅಧ್ಯಕ್ಷ ಅಭಿಲಾಷ್, ಪಧಾಧಿಕಾರಿಗಳಾದ ಅಶ್ವತ್, ಅಶೋಕ್, ಮಂಜುನಾಥ್, ರಘುಪತಿ, ವಿನಯ್, ವರ್ತಕರಾದ ಕೃಷ್ಣಮೂರ್ತಿ, ಟಿ.ಎಂ ನರೇಂದ್ರ, ಸುರೇಂದ್ರಗೌಡ, ಹಸನಬ್ಬ ಚಾರ್ಮಾಡಿ, ಶ್ರೇಯಸ್, ಸೋಮೇಶ್, ವಿಕ್ರಮ್, ಸಿದ್ದೀಕ್, ಸ್ಥಳಿಯರಾದ ಪ್ರಭಾಕರ ಬಿನ್ನಡಿ, ಕುಂಜುಮೋಣು, ಪ್ರವೀಣ್ ಪೂಜಾರಿ ರವಿ, ನವೀನ್ ಹಾವಳಿ, ಪರೀಕ್ಷಿತ್, ಆರೀಪ್, ಪ್ರದೀಪ್, ಸುದೀರ್, ಚಂದನ್, ಪವಿನ್, ರಘು ಇದ್ದರು.










