ಮೂಡಿಗೆರೆ : 12ನೇ ಶತಮಾನದ ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹ ಪತ್ತೆ…

412
firstsuddi

ಕೊಟ್ಟಿಗೆಹಾರ : ತ್ರಿಪುರ ಗ್ರಾ.ಪಂ ವ್ಯಾಪ್ತಿಯ ಕೊಟ್ರಕೆರೆಯ ನೆಲ್ಕುಂದಗುಡ್ಡದಲ್ಲಿ ಹನ್ನೆರಡನೇ ಶತಮಾನದ ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹ, ವಿಗ್ರಹದ ಪಾದಪೀಠ, ಬಸದಿ ಅವಶೇಷ ಹಾಗೂ ನಾಗರಕಲ್ಲು, ನಾಗರಕಟ್ಟೆ ಹಾಗೂ ಗಂಧ ಅರೆಯುವ ಕಲ್ಲುಗಳನ್ನು ಹವ್ಯಾಸಿ ಇತಿಹಾಸ ಸಂಶೋಧಕರಾದ ಹೆಚ್.ಆರ್.ಪಾಂಡುರಂಗ ಪತ್ತೆ ಹಚ್ಚಿದ್ದಾರೆ.

ಒಂದೂವರೆ ಅಡಿ ಎತ್ತರದ ಬಳಪದ ಕಲ್ಲಿನ, ಹೊಯ್ಸಳ ಶೈಲಿಯ ಅಷ್ಟಮಹಾಪ್ರಾತೀಹಾರ್ಯ ಲಾಂಛನ ಸಹಿತವಾದ, ಕಾಯೋತ್ಸರ್ಗ ಭಂಗಿಯಲ್ಲಿ ನಿಂತಿರುವ ಸುಂದರವಾದ ವಿಗ್ರಹ, ಜೈನಧರ್ಮದ ಎಂಟನೇ ತೀರ್ಥಂಕರ ಶ್ರೀ ಚಂದ್ರನಾಥ ಸ್ವಾಮಿಯವರದಾಗಿದ್ದು ವಿಗ್ರಹದ ಹಿಂದೆ ಸುಂದರ ಪ್ರಭಾವಳಿ, ವಿಗ್ರಹದ ಶಿರದ ಮೇಲೆ ಮುಕ್ಕೊಡೆ, ಹಾಗೂ ವಿಗ್ರಹದ ಎಡಭಾಗದಲ್ಲಿ ಚಂದ್ರನಾಥರ ಯಕ್ಷಿದೇವತೆ ಜ್ವಾಲಾಮಾಲಿನಿ ಶಿಲ್ಪ ಹಾಗೂ ಬಲಭಾಗದಲ್ಲಿ ಯಕ್ಷದೇವ ವಿಜಯನ ಶಿಲ್ಪ ಕೆತ್ತಲಾಗಿದೆ, ಚಂದ್ರನಾಥರ ವಿಗ್ರಹದ ಪ್ರಭಾವಳಿ ಭಗ್ನವಾಗಿದೆಯಾದರೂ ತೀರ್ಥಂಕರ ಬಿಂಬ ಮುದ್ದಾಗಿದೆ ಬಸದಿ ನೆಲೆಗಟ್ಟಿನ ಅವಶೇಷದ ಪಕ್ಕದಲ್ಲಿ ನಾಗಶಿಲ್ಪಗಳು ಹಾಗೂ ನಾಗಬನದ ಅವಶೇಷವಿದೆ. ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ ಆಡಳಿತದಲ್ಲಿ ತ್ರಿಪುರ ಸಾವಿರ ಪ್ರದೇಶವನ್ನು ಪಾಲಿಸುತಿದ್ದ ಜೈನಧರ್ಮ ನಾಡಪ್ರಭುವಿನ ಈ ಪುಟ್ಟ ಬಸದಿ ಅವರ ಅರಮನೆಯ ಆವರಣದಲ್ಲಿನ ಪೂಜಾ ಬಸದಿಯಾಗಿರಬಹುದೆಂದು ಸಂಶೋಧಕ ಹಿರೇನಲ್ಲೂರು ಪಾಂಡುರಂಗ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಹಳ್ಳಿಬೈಲು ಮಂಜುನಾಥ್ ಹಾಗೂ ಜಿ.ಹೊಸಹಳ್ಳಿ ಲೋಕೇಶ್ ಹಾಗೂ ಕಾಪಿಬೆಳೆಗಾರರಾದ ಕೊಟ್ರಕೆರೆ ರಮೇಶ್ ಇದ್ದರು.