ಮೂಡಿಗೆರೆ : ಕೊರೋನಾ ಸೋಂಕು ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಂದ್ ಆಗಿರುವ ಹೋಂ ಸ್ಟೇ ಹಾಗೂ ರೆಸಾರ್ಟ್ಗಳ ಪುನರ್ ಆರಂಭಕ್ಕೆ ಅವಕಾಶ ನೀಡಬೇಕು ಎಂದು ಕಾರ್ಮಿಕರ ಸಂಘದ ಸಂಚಾಲಕ ಮರಗುಂದ ಪ್ರಸನ್ನ ಅವರು ಒತ್ತಾಯಿಸಿದ್ದಾರೆ.
‘ಕೇಂದ್ರದಿಂದ ಲಾಕ್ಡೌನ್ ತೆರವಿನ ಮಾರ್ಗಸೂಚಿಗಳು ಪ್ರಕಟಗೊಂಡ ಬಳಿಕ ದೇಶಾದ್ಯಂತ ಬಹುತೇಕ ಉದ್ಯಮಗಳು ತಮ್ಮ ಕಾರ್ಯಗಳನ್ನು ಪುನರಾರಂಭ ಮಾಡಿವೆ. ಇದರ ಜೊತೆಗೆ ಅಂತರ ರಾಜ್ಯ ಸಾಗಾಟ ಹಾಗೂ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹೋಂ ಸ್ಟೇ ಹಾಗೂ ರೆಸಾರ್ಟ್ಗಳನ್ನು ತೆರೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಇದೇ ಉದ್ಯಮವನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ.
ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಪ್ರವಾಸೋದ್ಯಮವು ಉದ್ಯೋಗ ಸೃಷ್ಟಿ ಮಾಡಿ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದೆ. ಅದರಲ್ಲೂ ಹಳ್ಳಿಗಾಡಿನ ಜನರಿಗೆ ಕೃಷಿ ಹೊರತಾಗಿ ಅತಿ ದೊಡ್ಡ ಆದಾಯದ ಮೂಲವಾಗಿ ಹೊರಹೊಮ್ಮಿದ್ದು ಜಿಲ್ಲೆಯಾದ್ಯಂತ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯವನ್ನೂ ಕೂಡ ನೀಡುತ್ತಾ ಬಂದಿದೆ. ಜಿಲ್ಲೆಯಾದ್ಯಂತ ಇತರೆ ಉದ್ಯಮಗಳಿಗೆ ಒಂದು ನೀತಿಯಾದರೆ ಪ್ರವಾಸೋದ್ಯಮಕ್ಕೆ ಮತ್ತೊಂದು ನೀತಿಯನ್ನು ಅಳವಡಿಸಲಾಗಿದೆ. ಜಿಲ್ಲಾಡಳಿತವು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಧಿಕಾರಿಗಳು ಈ ವಿಚಾರದ ಬಗ್ಗೆ ಪುನರ್ ಮರುಪರಿಶೀಲನೆ ಮಾಡಿ ಲಾಕ್ಡೌನ್ ಅವಧಿಯಲ್ಲಿ ಜಾರಿ ಮಾಡಿರುವ ನಿರ್ಭಂಧಗಳನ್ನು ತೆರವುಗೊಳಿಸಿ ಕೂಡಲೇ ಹೋಂ ಸ್ಟೇ ಹಾಗೂ ರೆಸಾರ್ಟ್ಗಳ ಪುನರ್ ಆರಂಭಕ್ಕೆ ಅವಕಾಶ ನೀಡಬೇಕು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯ ಮಾಡಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಜಿಲ್ಲೆಯಾದ್ಯಂತ ಬಂದ್ ಆಗಿರುವ ಹೋಂ ಸ್ಟೇ, ರೆಸಾರ್ಟ್ ಪುನರಾರಂಭಕ್ಕೆ ಅವಕಾಶ ನೀಡಬೇಕು :...










