ಮೂಡಿಗೆರೆ : ಪಟ್ಟಣದಲ್ಲಿ ಆಧಾರ್‍ಗಾಗಿ ನಿರಂತರ ಜನಜಂಗುಳಿ ಸರತಿ ಸಾಲಿನಲ್ಲಿ ನಿಲ್ಲದಿದ್ದರೆ ಆಧಾರ್ ಪಡೆಯಲು ಸಾದ್ಯವಿಲ್ಲ. ವೃದ್ದರು ಮಕ್ಕಳು ಸೇರಿದಂತೆ ಎಲ್ಲರಿಗೂ ಒಂದೇ ಪರಿಸ್ಥಿತಿ ಆಧಾರ್‍ಗಾಗಿ ಇಡೀ ದಿನವನ್ನೇ ಮೀಸಲಿಡುವುದಲ್ಲದೇ ಕುಡಿಯಲು ತಿನ್ನಲು ಸಾಧ್ಯವಾಗದೇ ಉಪವಾಸ ಕುಳಿತುಕೊಂಡು ಕಾಯುವುದಲ್ಲದೇ ಇಲ್ಲಿ ಕುಳಿತುಕೊಳ್ಳಲು ಸಹ ಸ್ಥಳಾವಕಾಶವಿಲ್ಲದೇ ಕೇವಲ ನಿಂತುಕೊಂಡೇ ಆಧಾರ್‍ಗಾಗಿ ಕಾಯುವ ಪರಿಸ್ಥಿತಿ ಇದು ಇತ್ತೀಚಿನ ದಿನಗಳಲ್ಲಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರಲ್ಲಿ ನಿರಂತರವಾಗಿ ಎದ್ದು ಕಾಣುತ್ತಿರುವ ಒಂದು ಸಾಮಾನ್ಯ ದೃಶ್ಯ.
ಇಡೀ ಪಟ್ಟಣಕ್ಕೆ ಒಂದೇ ಆಧಾರ್ ನೊಂದಣಿ ಕೇಂದ್ರವು ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್‍ಗೆ ನೀಡಿದ್ದು ಈ ಬ್ಯಾಂಕಿನಲ್ಲಿ ಬ್ಯಾಂಕ್ ವ್ಯವಹಾರಕ್ಕೆ ಬರುವವರು ಅಧಿಕವಾಗಿರುವುದು ಸಾಮಾನ್ಯವಾಗಿರುವುದು ಅದರ ಜೊತೆ ಸರತಿ ಸಾಲಿನಲ್ಲಿ ಬ್ಯಾಂಕ್ ಮುಂದೆ ಮುಂಜಾನೆ 6 ಗಂಟೆಗೂ ಮೊದಲೆ ಬಂದು ಕಾದು ಕುಳಿತಿರುವ ಜನಸ್ಥೋಮ ಸರ್ಕಾರದ ಇಂತಹ ಮಹತ್ವಕಾಂಶಿ ಯೋಜನೆಗಳಲ್ಲೊಂದಾದ ಆಧಾರ್ ನೊಂದಣಿ ಮಾಡಿಸುವ ಸಲುವಾಗಿ ಎಲ್ಲಾ ಜನರು ಪಟ್ಟಣಕ್ಕೆ ಹೆಚ್ಚಾಗಿ ಬರುವುದರಿಂದ ಇಲ್ಲಿಯ ಪರಿಸ್ಥಿತಿಯನ್ನು ಅರಿತು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಒತ್ತಡವನ್ನು ತಂದು ಮತ್ತೊಂದು ಆಧಾರ್ ಕೇಂದ್ರ ನಿರ್ಮಿಸಿದಲ್ಲಿ ಇಲ್ಲಿಯ ಜನರಿಗೆ ಸಹಕಾರಿಯಾಗುತ್ತದೆ ಎಂದು ಇಲ್ಲಿನ ಜನರು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಧಾರ್ ನೊಂದಣಿ ಮಾಡಿಸಲು ಕಡ್ಡಾಯವಾಗಿದ್ದು ಅದರಂತೆ ಬ್ಯಾಂಕ್ ಖಾತೆಯಲ್ಲಿ ಇದರ ಜೋಡಣೆ ಕಾರ್ಯ ಹಾಗೂ ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯಲು ಇನ್ನಿತರ ಎಲ್ಲಾ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು ಅದೂ ಅಲ್ಲದೇ ಬಡವರ ಜೀವ ಹಿಂಡಲೆಂದೇ ಈಗಾಗಲೆ ಆಧಾರ್ ಕಾರ್ಡ್ ಜೋಡಣೆ ಪಡಿತರ ಚೀಟಿಯಲ್ಲಿ ನಮೂದಿಸಿ ಹೊಸದಾಗಿ ಪಡಿತರ ಚೀಟಿ ಪಡೆದಿದ್ದರೂ ಅದು ಸಾಕಾಗುವುದಿಲ್ಲ ಎಂಬ ಸಬೂಬಿನೊಂದಿಗೆ ಸರ್ಕಾರದ ನಿರ್ದೇಶನದಂತೆ ʼಈ.ಕೆ.ವೈ.ಸಿ, ಮಾಡಿಸುವುದು ಪ್ರತಿಯೊಬ್ಬರಿಗೂ ಕಡ್ಡಾಯ ಎಂಬ ನಿಯಮ ಒಸದಾಗಿ ತಂದಿದ್ದರಿಂದ ಇದರ ಪ್ರಗತಿಗಾಗಿ ಕುಟುಂಬದ ಎಲ್ಲಾ ಸದಸ್ಯರು ಆಧಾರ್ ಕಾರ್ಡ್ನೊಂದಿಗೆ ತಮ್ಮ ತಮ್ಮ ಪಡಿತರ ವಿತರಣೆ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿಯನ್ನು ನವೀಕರಿಸುವುದು ಅಗತ್ಯವಿರುತ್ತದೆ.
ಆಧಾರ್ ಕಾರ್ಡ್ ತಿದ್ದುಪಡಿ ಸೇರಿದಂತೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವರೆಲ್ಲರಿಗೂ ತಮ್ಮ ಕೆಲಸವಾಗಬೇಕಾದರೆ ವೃದ್ದರೂ ಮಕ್ಕಳೂ ಮಹಿಳೆಯರು ಸೇರಿದಂತೆ ಎಲ್ಲಾ ತರಹದ ಜನರು ಸರತಿ ಸಾಲಿನಲ್ಲಿ ನಿಂತು ಆಧಾರ್ ಪಡೆಯಲು ಟೋಕನ್ ಪಡೆದುಕೊಂಡರೆ ಮಾತ್ರ ಸಾಧ್ಯ ಇದಿಲ್ಲದಿದ್ದರೇ ಅವರಿಗೆ ಯಾವ ಕೆಲಸವು ಆಗುವುದಿಲ್ಲ ಅದೂ ಅಲ್ಲದೇ ಇಡೀ ತಾಲ್ಲೂಕಿಗೆ ಸಧ್ಯ ಕೇವಲ ಒಂದೇ ಆಧಾರ್ ನೊಂದಣಿ ಕೇಂದ್ರವಿದ್ದು ಅದರಲ್ಲಿ ದಿನಕ್ಕೆ ಸುಮಾರು 30 ರಿಂದ 40 ಟೋಕನ್ ಲೆಕ್ಕಾಚಾರದಲ್ಲಿ ಕೆಲಸವು ನಡೆಯುತ್ತಿದ್ದು ಇದು ಸಹ ಸ್ವಯಂಪ್ರೇರಿತವಾಗಿ ಇಲ್ಲಿಗೆ ಆಧಾರ್ ನೊಂದಣಿ ಮಾಡಿಸಲು ಬಂದಂತಹ ವ್ಯೆಕ್ತಿಗಳೇ ಆಧಾರ್‍ಗಾಗಿ ಯಾರು ಬೇಗ ಬರುತ್ತಾರೋ ಎಂಬಂತಹ ಲೆಕ್ಕವನ್ನು ಬರೆದಿಟ್ಟುಕೊಂಡು ತಮ್ಮ ತಮ್ಮ ಕೆಲಸವನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿಗೆ ನೊಂದಣಿಗೆ ಬಂದಂತಹ ಜನರ ಅಳಲಾಗಿದೆ.
ಸರ್ಕಾರದ ಎಲ್ಲಾ ರೀತಿಯ ಸೇವೆಯೂ ಜನರಿಗೆ ಸುಲಭದಲ್ಲಿ ದೊರಕಬೇಕೆಂದು ಸರ್ಕಾರ ನಿರ್ದರಿಸಿದ್ದರೂ ಅದು ಇಲ್ಲಿಗೆ ಅಥವಾ ಆಧಾರ್ ನೊಂದಣಿ ಮಾಡಿಸುವವರಿಗೆ ಕಷ್ಟವೇ ಸರಿ. ಇಂತಹ ಕಾರ್ಯವನ್ನು ಸುಲಭ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಸುಳ್ಳು ಹೇಳುತ್ತಿದೆಯೋ ಅಥವಾ ಅಧಿಕಾರಿಗಳು ಪೂರಕವಾಗಿ ಸ್ಪಂದಿಸುತ್ತಿಲ್ಲವೋ ಎಂದು ತೋಚದಂತಾಗಿದೆ. ಹಿಂದಿನ ದಿನಗಳಂತೆ ಅರ್ಜಿಯನ್ನು ತುಂಬಿಸಿ ಸರತಿ ಸಾಲಿನಲ್ಲಿ ನಿಂತು ಒಂದು ಕೆಲಸಕ್ಕಾಗಿ ಇಡೀ ದಿನವೂ ಸಾಕಾಗದೇ ವಾರಗಟ್ಟಲೇ ಪಟ್ಟಣಕ್ಕೆ ಅಲೆದು ವಿವಿದ ಹಳ್ಳಿಗಳಿಂದ ಬರುವ ಎಲ್ಲಾ ರೀತಿಯ ಜನರಿಗೆ ಕಷ್ಟವಾಗಬಾರದೆಂದು ಆನ್ ಲೈನ್ ವ್ಯವಸ್ಥೆಯಡಿ ಮುಂಗಡ ಕಾಯ್ದಿರಿಸುವ ರೀತಿಯಲ್ಲಿ ಸೇವೆಯನ್ನು ನೀಡಿದರೆ ಇದರಿಂದ ಜನರಿಗೆ ತಮ್ಮ ಕೆಲಸದ ಅರ್ಧದಷ್ಟು ಹೊರೆಕಮ್ಮಿಯಾಗಬಹುದು. ಕೇವಲ ಮಾತಿನಲ್ಲಿ ಡಿಜಿಟಲ್ ಮಾಡುತ್ತೇವೆ ಎಂಬಂತಹ ಪದಗಳು ಎಲ್ಲಾ ಕಡೆಗಳೆಲ್ಲಿಯೂ ಗುಣುಗುತ್ತಿದ್ದರೂ ಇದು ಕೇವಲ ಮುಗ್ದ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮಾತನಾಡುತ್ತಾರೋ ಅಥವಾ ಇದನ್ನು ನಿಜವಾಗಿಯೂ ಕಾರ್ಯರೂಪಕ್ಕೆ ತರುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೋ ಎಂದು ತಿಳಿಯದಾಗಿದೆ.











