ಮೂಡಿಗೆರೆ : ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹವನ್ನು ನೆರವೇರಿಸಲಾಯಿತು…

280
firstsuddi

ಕಳಸ : ಅಮೃತ ಸಭಾಭವನದಲ್ಲಿ ಬೆಳಿಗ್ಗೆ 11:30ಕ್ಕೆ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 30 ಜೋಡಿ ವಧು ವರರು ಮಂಗಲಸೂತ್ರ ಧಾರಣೆಯೊಂದಿಗೆ ಗೃಹಸ್ಥಾಶ್ರಮ ಪ್ರವೇಶ ಮಾಡಿದರು.
ಬೆಳಿಗ್ಗೆ ಹೊರನಾಡು ಧರ್ಮಕರ್ತ ಭೀಮೇಶ್ವರ ಜೋಷಿ ವಧುವಿಗೆ ಸೀರೆ, ರವಿಕೆ ಹಾಗೂ ವರನಿಗೆ ಶಾಲು, ದೋತಿ ನೀಡಿ ಹರಸಿದರು. ವಧುವರರು ದೇವರ ದರ್ಶನ ಪಡೆದು ನಂತರ ಮದುವೆಯ ಸಭಾಭವನ ಪ್ರವೇಶ ಮಾಡಿದರು.
ಡಾ|ಜಿ. ಭೀಮೇಶ್ವರ ಜೋಷಿ ದಂಪತಿಗಳು ಮಂಗಳಸೂತ್ರ ವಿತರಣೆ ಮಾಡಿದರು. ವೇದ ಘೋಷದೊಂದಿಗೆ ಮಂಗಳವಾದ್ಯ ಮೊಳಗಿದಾಗ ಒಂದೇ ಮುಹೂರ್ತದಲ್ಲಿ ವಧು-ವರರು ಹಾರ ವಿನಿಮಯ ಮಾಡಿ ವರನು ವಧುವಿಗೆ ಮಂಗಲ ಸೂತ್ರ ಕಟ್ಟಿದರು. ಅತ್ಯಂತ ಸರಳವಾಗಿ ವೇ||ಬ್ರ||ಶ್ರೀ ಉದಯಶಂಕರ ಶರ್ಮ ತಂತ್ರಿಗಳ ಪೌರೋಹಿತ್ಯದಲ್ಲಿ ವಿವಾಹ ಸಾಂಗವಾಗಿ ನೆರವೇರಿಸಿದರು
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಹೆಂಚುಗಳ ವಿತರಣೆ, ಸನ್ನದಾಸೋಹ ಯೋಜನೆಯಲ್ಲಿ ಆಯ್ದ ದೇವಸ್ಥಾನಗಳಿಗೆ ತಟ್ಟೆ-ಲೋಟಗಳ ವಿತರಣೆ, ಆನಂದಜ್ಯೋತಿ ಯೋಜನೆಯಲ್ಲಿ ಅರ್ಹಫಲಾನುಭವಿಗಳಿಗೆ ವಿಧ್ಯುಚ್ಚಕ್ತಿ ಸಂಪರ್ಕ ಪತ್ರ ವಿತರಣೆ,ಕೃಷಿ ಸಮೃದ್ಧಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆಯು ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರುಶಾಂತೇಶ್ವರ ಮಹಾಸಂಸ್ಥಾನ ಹಿರೇಮಠ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸತ್ಯ ಹೇಳುವವರು ಮತ್ತು ಮುಗ್ದ ಮನಸ್ಸಿನವರು ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯುತ್ತಾರೆ. ಅಹಂಕಾರ ಪಟ್ಟು ಜನರ ಹತ್ತಿರ ಹೋದರೆ ಕೆಳಗೆ ಇಳಿಸುತ್ತಾರೆ ,ತಲೆ ತಗ್ಗಿಸಿ ಹೋದರೆ ಜನ ನಮ್ಮನ್ನು ಎತ್ತರಕ್ಕೆ ಏರಿಸುತ್ತಾರೆ. ಹಸಿದವರಿಗೆ ಅನ್ನ ನೀಡುವವರೆ ನಡೆದಾಡುವ ದೇವರು. ಶ್ರೀ ಕ್ಷೇತ್ರದ ಧರ್ಮಕರ್ತ ದಂಪತಿಗಳು ನಡೆದಾಡುವ ದೇವರು ಎಂದರೇ ತಪ್ಪಾಗಲಾರದು ಎಂದು ಹೇಳಿ ನೂತನ ವಧೂ-ವರರಿಗೆ ಆಶೀರ್ವದಿಸಿದರು.
ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಸರಳ ಜೀವನ ಸರಳ ವಿವಾಹ ಎಂಬ ಪರಿಣಾಮಕಾರಿ ಸಂದೇಶವನ್ನು ಸಮಾಜಕ್ಕೆ ಶ್ರೀ ಕ್ಷೇತ್ರ ಹೊರನಾಡು ನೀಡುತ್ತಿದೆ.ಇಂದಿನ ಕಾಲದಲ್ಲಿ ವಿವಾಹಕ್ಕಾಗಿ ಬಹಳ ದುಂದು ವೆಚ್ಚ ನಡೆಯುತ್ತಿದೆ ಬೆಂಗಳೂರಿನಂತ ನಗರದಲ್ಲಿ ದಿನಕ್ಕೆ 800 ಮದುವೆಯಾಗುತ್ತದೆ, ವರ್ಷದಲ್ಲಿ 6 ಕೋಟಿಯಷ್ಟು ಆಹಾರ ಹಾಳಾಗುತ್ತಿದೆ, ಆ ಹಾಳಾಗುವ ಆಹಾರದಲ್ಲಿ 1 ಸಾವಿರಕ್ಕೂ ಅಧಿಕ ಮದುವೆಯನ್ನು ಮಾಡಬಹುದು, ಇಂದು ಹೊರನಾಡು ರಾಜ್ಯದ ಅತ್ಯಂತ ಹೆಮ್ಮೆಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದರು.
ಚಲನ ಚಿತ್ರ ನಟ, ನಿರ್ಮಾಪಕ, ಧೀರ ರಾಕ್ ಲೈನ್ ವೆಂಕಟೇಶ್ ಮಾತನಾಡಿ. ಯೋಗ ಮತ್ತು ಯೋಗ್ಯತೆ ಹಿರಿಯರ ಆಶೀರ್ವಾದದಿಂದ ಬರುವಂತದ್ದು.ನನಗೆ ಈ ಯೋಗ ಮತ್ತು ಯೋಗ್ಯತೆ ಬಂದಿರುವುದು ಇಲ್ಲಿಯ ಜೋಷಿ ದಂಪತಿ ಮತ್ತು ಅನ್ನಪೂರ್ಣೇಶ್ವರಿಯ ಆಶೀರ್ವಾದದಿಂದ . ಮನುಷ್ಯನಿಗೆ ಬಹಳ ಮುಖ್ಯವಾಗಿ ಬೇಕಾಗಿದ್ದು ನೆಮ್ಮದಿ, ಶ್ರೀ ಕ್ಷೇತ್ರದಲ್ಲಿ ಮದುವೆಯಾಗಿರುವುದು ನಿಮ್ಮೆಲ್ಲರ ಪುಣ್ಯ ಎಂದು ವಧುವರರನ್ನು ಆರ್ಶಿವದಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ. ತಮ್ಮ ಬದುಕಿಗಾಗಿ ರೈತರು ಸಾಲ ಮಾಡಿ ಆ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥಹ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳು ಕೋಟ್ಯಾಂತರ ಹಣವನ್ನು ವಿನಿಯೋಗ ಮಾಡುವ ಮುಖಾಂತರ ಸರ್ಕಾರದ ಹೊರೆಯನ್ನು ಕಡಿಮೆಗೊಳಿಸುತ್ತಿದ್ದಾರೆ.ಇಂತಹ ಕ್ಷೇತ್ರಗಳಿಗೆ ಸರ್ಕಾರವು ಹೆಚ್ಚಿನ ಮೂಲಭೂತ ಸೌಲಭ್ಯ ನೀಡಲು ಸರ್ಕಾರ ಅನುದಾನಗಳನ್ನು ನೀಡಿದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಹೊರನಾಡು ಹೆಬ್ಬಾಳೆ ಮುಳುಗು ಸೇತುವೆ ರಾಜ್ಯದಲ್ಲೆ ಮೊದಲನೇ ಸ್ಥಾನದಲ್ಲಿದೆ, ಸೇತುವೆ ಅಭಿವೃದ್ದಿಗೆ ಶ್ರಮ ವಹಿಸುತ್ತಿದ್ದೇನೆ.ಕಳಸ ತಾಲ್ಲೂಕು ಕೇಂದ್ರವಾಗಿರುವುದರಿಂದ ಅಲ್ಲಿಗೆ ಬರುವ ಅಧಿಕಾರಿಗಳಿಗೆ ವಸತಿಗಾಗಿ ಕುದುರಮುಖದಲ್ಲಿರುವ ವಸತಿಗೃಹಗಳನ್ನು ಮೀಸಲಿಡಬೇಕೆಂದು ಸರ್ಕಾರದ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ|| ಜಿ. ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ. ವಧುವರರು ಅರಿತು ಬಾಳಿ, ಮನೆಯ ಹಿರಿಯರನ್ನು ಗೌರವದಿಂದ ಕಾಣಿರಿ, ಕಿರಿಯರನ್ನು ಪ್ರೀತಿಯಿಂದ ಕಾಣುವಂತೆ ತಿಳಿಸಿದರು, ಒಂಟಿ ಬಾಳು ಬಂಡವಾಳವಾಗುತ್ತದೆ ಎಂಬುವುದನ್ನು ಮರೆಯದಿರಿ ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸನ್ಮತಿ ವೃಷಭರಾಜ್, ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಶ್ರೀಮತಿ ರಾಜಲಕ್ಷ್ಮೀ ಭೀ. ಜೋಷಿ, ಜಿ. ರಾಮನಾರಾಯಣ ಜೋಷಿ, ಶ್ರೀ ಜಿ. ರಾಜಗೋಪಾಲ ಜೋಷಿ ಇದ್ದರು.