ಕಳಸ : ಸುಳ್ಳಿನ ಕಂತೆಯನ್ನು ಕಟ್ಟಿ ಅದರಲ್ಲಿ ಜೀವನ ಮಾಡುವ ಬಿಜೆಪಿಯ ನಿಜ ಬಣ್ಣ ಬಯಲಾಗುತ್ತಿದೆ ಆದ್ದರಿಂದ ಮೋದಿಯುಗದ ಅಂತ್ಯದ ಆರಂಭವಾಗುತ್ತಿದೆ ಎಂದು ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಪಟ್ಟಣದಲ್ಲಿ ನಿನ್ನೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಸುಳ್ಳಿನ ನಾಟಕವಾಡಿ ಅಧಿಕಾರ ಪಡೆದು ಕೊಂಡು ಈಗ ಬೆಲೆ ಏರಿಕೆ ಕೂಪಕ್ಕೆ ಜನರನ್ನು ತಲ್ಲುತ್ತಿದ್ದಾರೆ. ನಾಲ್ಕು ದಶಕಗಳಿಂದ ಜೆಡಿಎಸ್ ಮಾಡಿಕೊಂಡು ಬಂದಿರುವ ಹೋರಾಟದ ಪರಿಣಾಮ ಕಳಸ ತಾಲ್ಲೂಕು ಕೇಂದ್ರದ ಘೋಷಣೆಯಾಗಿದೆ. ಅದನ್ನು ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ. ಆದರೆ ಇವತ್ತು ನಾವೇ ಮಾಡಿದ್ದು ಎಂದು ಉಳಿದ ಪಕ್ಷಗಳು ಸುಳ್ಳಿನ ಕಂತೆಯನ್ನು ಹೇಳುತ್ತಾ ತಿರುಗಾಡುತ್ತಿದ್ದಾರೆ. ಸುಳ್ಳು ಹೇಳಿ ಪಡಕೊಂಡ ಅಧಿಕಾರ ಹೆಚ್ಚು ದಿನ ಉಳಿಯೋದಿಲ್ಲ. ಮುಂದಿನ ಚುನಾವಣೆಗೆ ತಯಾರಾಗಲೂ ಭೂತ್ ಮಟ್ಟದಿಂದ ಪದಾಧಿಕಾರಿಗಳ ಆಯ್ಕೆ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ ಅಧಿಕಾರಕ್ಕಾಗಿ ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಹಾರೋದು ಸುಲಭ ಆದರೆ ಅಲ್ಲಿ ಅನುಭವಿಸು ಕಷ್ಟ ಅಷ್ಟಿಷ್ಟಲ್ಲ. ಸೋಲು ಗೆಲುವಿರಲಿ ಒಂದೇ ಪಕ್ಷದಲ್ಲಿದ್ದುಕೊಂಡು ಜಯಿಸಬೇಕು. ಕಳಸ ತಾಲ್ಲೂಕು ಕೇಂದ್ರವನ್ನು ಜೆಡಿಎಸ್ ಪಕ್ಷ ಮಾಡಿರುವುದು ಆದ್ದರಿಂದ ನಾವು ಮಾಡಿದ್ದು ಎಂದು ಉಳಿದ ಪಕ್ಷಗಳು ಹೇಳಿದ್ರೆ ಅದನ್ನು ನಾವು ನಂಬೋದಿಲ್ಲ. ಕಳಸದಲ್ಲಿ ತಾಲ್ಲೂಕು ಕೇಂದ್ರ ಪಟ್ಟಣ ಪಂಚಾಯಿತಿ ಆಗುತ್ತದೆ ಎಂದಾದರೆ ಅದಕ್ಕೆ ಜೆಡಿಎಸ್ ನೇರ ಕಾರಣವಾಗಿದೆ.ಕಳಸ ತಾಲ್ಲೂಕಿನ ನೆರೆ ಬಂದು ರೈತರು ಆತ್ಯ ಹತ್ಯೆ ಮಾಡಿಕೊಂಡಾಗ, ನೆರೆ ಸಂತ್ರಸ್ಥರಿಗೆ ನೆರವು ನೀಡಿದ್ದು,ಇನಾಂ ಭೂಮಿ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದು ಹೆಚ್.ಡಿ.ಕುಮಾರಸ್ವಾಮಿ ಎನ್ನುವುದನ್ನು ಮರೆಯಬೇಡಿ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಜೆಡಿಎಸ್ ಪಕ್ಷ ಮಾಡಿದ ಕೆಲಸವನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಜೆಡಿಎಸ್ ಪಕ್ಷದ ಕಳಸ ಘಟಕದ ಅಧ್ಯಕ್ಷ ಸಂತೋಷ್ ಹಿನಾರಿ ಮಾತನಾಡಿ ಜೆಡಿಎಸ್ ಪಕ್ಷ ಯಾರಿಗೂ ಬೆಂಬಲ ಕೊಡುವ ಪ್ರಶ್ನೇಯೇ ಇಲ್ಲ. ಇಂತಹ ಅಪಪ್ರಚಾರಗಳಿಗೆ ಯಾರೂ ಕಿವಿಕೊಡುವುದು ಬೇಡ.ಪಕ್ಷ ಇಂದಿಗೂ ಭದ್ರವಾಗಿದೆ. ಹೆಚ್ಚಿನ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ.ಕಾರ್ಯಕರ್ತರು ಎದೆ ಗುಂದದೆ ಇರಬೇಕು. ಕಾರ್ಯಕರ್ತರಿಂದ ಪಕ್ಷದ ಬೆಳವಣಿಗೆ ಮತ್ತಷ್ಟು ಗಟ್ಟಿಯಾಗಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ,ರಾಜ್ಯ ಕಾರ್ಯದರ್ಶಿ ಜ್ವಾಲನಯ್ಯ,ಆಶಾಲತಾ ಜೈನ್, ಯುವ ಜನತಾದಳದ ಅಧ್ಯಕ್ಷ ಸುಜಿತ್,ಯುವ ಜನತಾದಳ ಮೂಡಿಗೆರೆ ತಾಲ್ಲೂಕು ಕಾರ್ಯಧ್ಯಕ್ಷ ಆದರ್ಶ, ಎಸ್ಟಿ ವಿಭಾಗದ ಅಧ್ಯಕ್ಷ ಸುರೇಶ್,ಮುಖಂಡರಾದ ಬ್ರಹ್ಮದೇವ,ರವಿರೈ,ಅನಿಲ್ ಡಿಸೋಜಾ,ಅರುಣ್ ಕುಮಾರ್ ಇತರರು ಇದ್ದರು.










