ಮೂಡಿಗೆರೆ : ಹೆಜ್ಜೇನು ಕಚ್ಚಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಹಾಂದಿ ಸಮೀಪದ ತೋಟವೊಂದರಲ್ಲಿ ನಡೆದಿದೆ. ಸುಬ್ಬಯ್ಯ ಶೆಟ್ಟಿ (75) ಮೃತರು ಎಂದು ಗುರುತಿಸಲಾಗಿದೆ. ಇವರು ತಾಲೂಕಿನ ಬಿಳಗುಳ ಗ್ರಾಮದ ವಾಸಿ ಎನ್ನಲಾಗಿದ್ದು, ಹಲವು ವರ್ಷಗಳಿಂದ ಕಾಫಿ ತೋಟದಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದು, ಎಂದಿನಂತೆ ನಿನ್ನೆಯು ಕೂಡಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ಮಾಡಿ ಇವರಿಗೆ ಕಚ್ಚಿದ್ದು, ಇದರಿಂದ ಗಂಭೀರವಾಗಿದ್ದ ಸುಬ್ಬಯ್ಯ ಶೆಟ್ಟಿ ಅವರನ್ನು ತಕ್ಷಣ ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಬಳಿಕ ಹಾಸನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಡರಾತ್ರಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್ ಹಾಗೂ ತಾಲೂಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಳೂರು ಬಾಲು ಅವರು ಮೃತರ ನಿವಾಸಕ್ಕೆ ತೆರಳಿ ಸಾಂತ್ವಾನ ಹೇಳಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










