ಮೆಟ್ರೋ ನಿಲ್ದಾಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ- ಕಿಡಿಗೇಡಿ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ…

42
firstsuddi

ಬೆಂಗಳೂರು: ನಗರದ ಲುಲು ಮಾಲ್​ನಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಲೈಂಗಿಕ ಕಿರುಕುಳ ಘಟನೆ ನಗರದಲ್ಲಿ ನಡೆದಿದೆ. ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಕಿಡಿಗೇಡಿಯ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆ 8:30ರ ಸುಮಾರಿನಲ್ಲಿ ಸದಾ ಜನಜಂಗುಳಿ ಇರುವ ಮೆಜೆಸ್ಟಿಕ್ ಮೆಟ್ರೋದಲ್ಲಿ ಘಟನೆ ನಡೆದಿದೆ. ಯುವತಿ ಪ್ರತಿ ದಿನ ಕಾಲೇಜಿಗೆ ಬಸ್‌ನಲ್ಲೇ ತೆರಳುತ್ತಿದ್ದಳು. ಆದರೆ ಸೋಮವಾರ ಬೆಳಗ್ಗೆ 8:30ರ ಸುಮಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಲು ಮೆಜೆಸ್ಟಿಕ್‌ಗೆ ಬಂದಿದ್ದಳು. ಮೆಟ್ರೊ ಏರುವಾಗ ದಟ್ಟಣೆಯಿತ್ತು. ಮೆಟ್ರೋ ಹತ್ತಿದ ನಂತರ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯನ್ನು ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಅರಿವಾದಾಗ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಸಹಪ್ರಯಾಣಿಕರು ನೆರವಿಗೆ ಬಂದಿರಲಿಲ್ಲ. ಆಕೆ ಅತ್ತು ಕಿರುಚಿದರೂ ಯಾರೂ ಆಕೆಯ ಸಹಾಯಕ್ಕೆ ಬರಲೇ ಇಲ್ಲ. ಈ ಕುರಿತು ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ವಿಚಾರ ಬಹಿರಂಗ ಪಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬಿಎಂಆರ್‌ಸಿಎಲ್ ಅಧಿಕಾರಿ ಯಶವಂತ್ ಚೌಹಾಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವ ಟೈಂ, ಯಾವ ಟ್ರೈನ್ ಅಂತಾ ಗೊತ್ತಾಗಬೇಕಿದೆ. ಈಗಾಗಲೇ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಇದುವರೆಗೂ ಈ ಕೇಸ್ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೂ ನಾವು ಕ್ರಮ ವಹಿಸಿ ಪರಿಶೀಲನೆ ಮಾಡುತ್ತಿದ್ದೇವೆ. ಇದರ ಬಗ್ಗೆ ವಿಚಾರಿಸಿ ಹೇಳುತ್ತೇವೆ. ಶೀಘ್ರದಲ್ಲೇ ಪತ್ತೆ ಮಾಡುತ್ತೇವೆ ಎಂದರು.