ಬೆಂಗಳೂರು : ಪ್ರಾಣ ಹೋದರು ಪರವಾಗಿಲ್ಲ. ಮೆಡಿಕಲ್ ಕಾಲೇಜು ಬಿಟ್ಟುಕೊಡುವುದಿಲ್ಲ ಎಂಬ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಅವರು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಕನಕಪುರವನ್ನು ಕನಾಟಕ ಎಂದು ತಿಳಿದುಕೊಂಡಿದ್ದಾರೆ. ಕನಕಪುರ ಕರ್ನಾಟಕದಲ್ಲಿ ಕೇವಲ ಒಂದು ತಾಲೂಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಓರ್ವ ಹೋರಾಟಗಾರ ಅನ್ನೋದನ್ನು ಒಪ್ಪುತ್ತೇನೆ. ಜೀವ ಉಳಿಸಲು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗುತ್ತದೆ. ಹಾಗಾಗಿ ಡಿಕೆ ಶಿವಕುಮಾರ್ ಪ್ರಾಣ ಬಿಡುವ ಮಾತನಾಡುವುದು ಬೇಡ. ಮೊದಲು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಅದನ್ನು ಡಿ.ಕೆ. ಶಿವಕುಮಾರ್ ಅವರು ಕನಕಪುರದಲ್ಲಿ ಆಗಬೇಕು ಎಂದು ತೆಗೆದುಕೊಂಡು ಹೋದರು. ಅದು ಅಲ್ಲದೇ ಕನಕಪುರಕ್ಕೆ 450 ಕೋಟಿ ರೂ ಹಣವನ್ನು ನೀಡಿ ಅನ್ಯಾಯ ಮಾಡಿದರು. ಮೊದಲು ಜಿಲ್ಲೆಗೆ ಮೆಡಿಕಲ್ ಕಾಲೇಜು ಆಗಬೇಕೆಂದು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಉಪ ಚುನಾವಣೆಗೆ ಮುನ್ನವೇ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿಸುತ್ತೇನೆ. ಇಲ್ಲವಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ನೇಣು ಹಾಕೋದು, ನೇಣು ಹಾಕಿಸಿಕೊಳ್ಳವ ಎಂಬಿತ್ಯಾದಿ ಮಾತುಗಳು ಡಿಕೆ ಶಿವಕುಮಾರ್ ಅವರ ಸಂಸ್ಕಾರವನ್ನು ತೋರಿಸುತ್ತದೆ. ಹಿರಿಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿ ಭಾವನೆಯಿಂದ ಕಾಣೋದನ್ನು ನಮ್ಮ ಮನೆಯಲ್ಲಿ ಕಲಿಸಿಕೊಟ್ಟ ಸಂಸ್ಕಾರ. ಹೊಡೆಯೋದು, ಬಡಿಯೋದು, ಕೊಲ್ಲೋದು ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ ಎಂದು ಕಾಲೆಳೆದರು.










