ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬಸ್– ಇಬ್ಬರು ಮಕ್ಕಳು ಸೇರಿ 21 ಮಂದಿ ಸಾವು…

55
firstsuddi

ರೋಮ್: ಇಟಾಲಿಯನ್ ನಗರದ ವೆನಿಸ್ ಬಳಿಯ ಮೇಲ್ಸೇತುವೆಯಿಂದ ಬಸ್ ಕೆಳಗೆ ಬಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.

ವೆನಿಸ್‍ನ ಉಪ ನಗರವಾದ ಮೆಸ್ಟ್ರೆಯದಲ್ಲಿ ನಿನ್ನೆ ಈ ಭಾರೀ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 15 ಮಂದಿ ಬದುಕುಳಿದಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸವೇ ಮಾಡಬೇಕಾಯಿತು. ಮೃತರಲ್ಲಿ ಇಬ್ಬರು ಮಕ್ಕಳು, ಐವರು ಉಕ್ರೇನಿಯನ್ನರು, ಒಬ್ಬ ಜರ್ಮನ್ ಮತ್ತು ಇಟಾಲಿಯನ್ ಚಾಲಕ ಸೇರಿದ್ದಾರೆ.

ವೆನಿಸ್ ಮತ್ತು ಹತ್ತಿರದ ಮಾರ್ಗೇರಾ ಜಿಲ್ಲೆಯ ಕ್ಯಾಂಪ್‌ಸೈಟ್ ನಡುವೆ ಪ್ರವಾಸಿಗರನ್ನು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ರಾತ್ರಿ 7:45ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ದುರಂತಕ್ಕೆ ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ ವಿಷಾದ ವ್ಯಕ್ತಪಡಿಸಿದ್ದಾರೆ.

ಬಸ್ ಮಿಥೇನ್ ಅನಿಲದಿಂದ ಚಾಲಿತವಾಗಿದೆ. ಮೇಲ್ಸೇತುವೆಯಿಂದ ವಿದ್ಯುತ್ ತಂತಿಗಳ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಬಸ್‍ನಲ್ಲಿ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅವರಲ್ಲಿ 21 ಮಂದಿ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.