ಮೈಸೂರಿನಲ್ಲಿ ಅ.12ರವರೆಗೆ ದೀಪಾಲಂಕಾರ ವಿಸ್ತರಣೆ…

58
firstsuddi

ಮೈಸೂರು : ನಗರದಲ್ಲಿ ದಸರಾ ವೇಳೆ ಅಳವಡಿಸುವ ದೀಪಾಲಂಕಾರವನ್ನು ದಸರಾ ಕಳೆಯುತ್ತಿದ್ದಂತೆಯೇ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ದಸರಾ ಕಳೆದ ಬಳಿಕವೂ ಒಂದೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗುತ್ತಿದೆ. ಈ ಬಾರಿ ದಸರಾ ಕಳೆದ ಬಳಿಕವೂ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದ್ದು ಇನ್ನೆರಡು ದಿನಗಳ ಕಾಲ ನಗರದಲ್ಲಿ ದೀಪಾಲಂಕಾರ ಇರಲಿದೆ.

ನಾಡಹಬ್ಬ ದಸರಾ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ದಸರಾ ದೀಪಾಲಂಕಾರದ ಅವಧಿಯನ್ನು ವಿಜಯ ದಶಮಿವರೆಗೆ ನಿಗದಿಪಡಿಸಲಾಗಿತ್ತು. ಆದರೆ, ಉದ್ಯಮಿಗಳು, ಸಾರ್ವಜನಿಕರ ಅಪೇಕ್ಷೆಯಂತೆ ಅಕ್ಟೋಬರ್ 10 ರ ವರೆಗೆ ವಿಸ್ತರಿಸಲಾಯಿತು. ಆದರೆ, ಇದೀಗ ಮತ್ತಷ್ಟು ದಿನ ದೀಪಾಲಂಕಾರ ಉಳಿಸಿಕೊಳ್ಳಬೇಕೆಂಬುದು ಜನಪ್ರತಿನಿಧಿಗಳು, ಸಾರ್ವಜನಿಕರು, ವ್ಯಾಪಾರಿಗಳ ಒತ್ತಾಸೆ ಆಗಿರುವ ಕಾರಣ ಸೆಸ್ಕ್ ಗೆ ಹೆಚ್ಚುವರಿ ಆರ್ಥಿಕ ಹೊರೆಯಾದರೂ ನಗರದ ಹೃದಯ ಭಾಗ ಹಾಗೂ ಮುಖ್ಯರಸ್ತೆಗಳಲ್ಲಿ ಅ.12ರವರೆಗೆ ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಹಾಗೂ ದಸರಾ ವಿದ್ಯುತ್ ದೀಪಾಲಂಕಾರ ಉಪಸಮಿತಿ ಅಧ್ಯಕ್ಷ ಟಿ.ರಮೇಶ್ ತಿಳಿಸಿದರು.