ಮೈಸೂರಿನಲ್ಲಿ ಪ್ರಧಾನಿ ಯೋಗಾಭ್ಯಾಸ – 15 ಸಾವಿರ ಜನರ ಜೊತೆ ಮೋದಿ ಯೋಗ.

58
firstsuddi

ಮೈಸೂರು : ಎಂಟನೇ ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಚರಿಸಿದರು. ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. 15 ಸಾವಿರ ಯೋಗ ಪಟುಗಳು ಪ್ರಧಾನಿಗಳ ಜೊತೆಯಲ್ಲಿ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.

ಬೆಳಗ್ಗೆ 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು. 15 ಸಾವಿರ ಮಂದಿ ಪೈಕಿ ಸುಮಾರು 8 ಸಾವಿರ ಜನರು ಮೋದಿ ಯೋಗ ಮಾಡುವ ಜಾಗದ ಅಕ್ಕಪಕ್ಕದಲ್ಲೇ ಯೋಗ ಮಾಡಿದ್ದಾರೆ. ಉಳಿದವರು ಅರಮನೆಯ ಹಿಂಭಾಗದ ಆವರಣದಲ್ಲಿ ಯೋಗ ಮಾಡಿದ್ದಾರೆ. 15 ಸಾವಿರ ಜನರಲ್ಲಿ 3 ಸಾವಿರ ಜನರು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 12 ಸಾವಿರ ಮಂದಿ ಸ್ಥಳೀಯರು ಭಾಗವಹಿಸಿದ್ದರು.

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಮೋದಿ, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನದ ಶುಭಾಶಯಗಳು. ಯೋಗದಿನದ ಪ್ರಯುಕ್ತ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಅಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆವೀಡು ಮೈಸೂರಿಗೆ ಪ್ರಣಾಮ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಶುರು ಮಾಡಿದರು.

ಯೋಗವು ಜಗತ್ತಿನ ಹಲವು ಸಮಸ್ಯೆಗಳಿಗೆ ಉತ್ತಮ ಮದ್ದು ಎನಿಸಿದೆ. ಈಗ ದೇಶದ 75 ವಿವಿಧ ನಗರಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಯೋಗದಿನ ನಡೆಯುತ್ತಿದೆ. ಇವು ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಔನ್ನತ್ಯಕ್ಕೆ ಸಾಕ್ಷಿಯಾಗಿವೆ ಎಂದರು.

ಯೋಗದಿಂದ ಸಮಾಜಕ್ಕೆ, ದೇಶಕ್ಕೆ ಅಷ್ಟೇ ಅಲ್ಲ ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಇದನ್ನು ಕೆಲವರು ವಿಪರೀತದ ಚಿಂತನೆ ಎಂದುಕೊಳ್ಳಬಹುದು. ಆದರೆ ಭಾರತೀಯರಿಗೆ ಇದು ಹೊಸದಲ್ಲ. ಪಿಂಡದಲ್ಲಿರುವುದು ಬ್ರಹ್ಮಾಂಡದಲ್ಲಿದೆ ಎನ್ನುವುದು ಭಾರತೀಯರ ಚಿಂತನೆ. ನಾವು ಬದಲಾಗಲು ಆರಂಭಿಸಿದರೆ ಜಗತ್ತು ಬದಲಾಗುವುದು ಆರಂಭಿಸುತ್ತದೆ ಎಂದು ಹೇಳಿದರು.