ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು, ಬೆಳಗಾವಿಯಲ್ಲಿನ ಸೋಲಿನ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, ಮೈಸೂರು ಮತ್ತು ಬೆಳಗಾವಿಯಲ್ಲಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸವಿತ್ತು. ಬೆಳಗಾವಿ ಮತ್ತು ಮೈಸೂರಿನಲ್ಲಿ ಅಷ್ಟು ಜನ ಶಾಸಕರು, ಸಂಸದರಿದ್ದರೂ ಸೋತಿದ್ದೇವೆ. ಆ ಸೋಲಿನ ಬಗ್ಗೆ ಚಿಂತನೆ ಮಾಡಬೇಕಿದೆ. ಸಮಗ್ರ ತನಿಖೆ ಮಾಡಿ ಯಾರು ನಮಗೆ ಸಹಕಾರ ನೀಡಿಲ್ಲ ಎಂಬ ತನಿಖೆ ಆಗಬೇಕಿದೆ. ನಿನ್ನೆ ಸಿಎಂ ಬೊಮ್ಮಾಯಿ ನನ್ನ ಜತೆಗೆ ಚರ್ಚೆ ಮಾಡಿದ್ದಾರೆ. ಸಮಗ್ರ ತನಿಖೆ ಮಾಡಿ ವಾಸ್ತವಿಕ ಸ್ಥಿತಿಗತಿ ತಿಳಿದುಕೊಂಡು ಆ ಬಗ್ಗೆ ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧೀವೇಶನದ ಕುರಿತು ಮಾತನಾಡಿದ ಅವರು, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯಿಂದ 2 ದಿನ ವಿಶೇಷ ಚರ್ಚೆ ನಡೆಸಬೇಕೆಂದು ಸ್ಪೀಕರ್ ಅವರು ತಿಳಿಸಿದ್ದಾರೆ. ಅದಕ್ಕೆ ಸಿಎಂ ಬೊಮ್ಮಾಯಿ ಅವರು ಸಹಮತ ಸೂಚಿಸಿದ್ದಾರೆ ಎಂದು ತಿಳಿಸಿದರು.










