ಮೋದಿ ತಾಯಿ ಹೀರಾಬೆನ್ ವಿಧಿವಶ – ಗಣ್ಯರ ಸಂತಾಪ…

66
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಮೋದಿ ಪ್ರಧಾನಿಯಾಗಿದ್ದರೂ ತಾಯಿ ಹೀರಾಬೆನ್ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಹೀರಾಬೆನ್ ಗೆ ಇತ್ತೀಚೆಗಷ್ಟೇ 100 ವರ್ಷ ತುಂಬಿತ್ತು. ಶತಾಯುಷಿ ಆಗಿದ್ದ ಅವರು ಈಗ ಇಲ್ಲ. ಗಾಂಧಿನಗರದಲ್ಲಿರುವ ತಮ್ಮ ಕಿರಿಯ ಮಗ ಪಂಕಜ್ ಮೋದಿ ನಿವಾಸದಲ್ಲಿ ಹೀರಾಬೆನ್ ವಾಸಿಸುತ್ತಿದ್ದರು.

ಹೀರಾಬೆನ್ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ತಾಯಿಯ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ತಾಯಿ ಒಬ್ಬ ವ್ಯಕ್ತಿಯ ಜೀವನದ ಮೊದಲ ಸ್ನೇಹಿತೆ ಹಾಗೂ ಶಿಕ್ಷಕಿಯಾಗಿರುತ್ತಾರೆ. ಇಂತಹವರನ್ನು ಕಳೆದುಕೊಂಡಾಗ ಉಂಟಾಗುವ ನೋವು ನಿಸ್ಸಂದೇಹವಾಗಿ ವಿಶ್ವದಲ್ಲೇ ದೊಡ್ಡ ನೋವಾಗಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ, ಮಗನಿಗೆ ತಾಯಿಯೇ ಇಡೀ ಜಗತ್ತು. ಅವರ ಸಾವು ತುಂಬಲಾಗದ ನಷ್ಟ ಎಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ. ತಾಯಿಯ ಸಾವು ಒಬ್ಬರ ಜೀವನದಲ್ಲಿ ತುಂಬಲು ಅಸಾಧ್ಯವಾದ ಶೂನ್ಯವನ್ನು ಉಂಟುಮಾಡುತ್ತದೆ. ಈ ದುಃಖದ ಸಮಯದಲ್ಲಿ ಪ್ರಧಾನಮಂತ್ರಿ ಮತ್ತು ಅವರ ಇಡೀ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಹೀರಾಬೆನ್ ಅವರ ನಿಧನದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅವರ ಸರಳತೆ ಮತ್ತು ಪ್ರೀತಿಯ ಸ್ವಭಾವದಿಂದ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.

ಹೀರಾಬೆನ್ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಹೀರಾಬೆನ್ ಅವರು ಶತಾಯುಷಿಯಾಗಿ ಅವರು ತಮ್ಮ ಪೂರ್ಣ ಜೀವನವನ್ನು ನಡೆಸಿದ್ದಾರೆ. ಆದರೆ ಒಬ್ಬ ತಾಯಿಯಾಗಿ ತನ್ನ ಸುತ್ತಲೂ ಶಾಶ್ವತವಾಗಿ ಶಕ್ತಿ ತುಂಬಲು ಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ತಮಗಾದ ನಷ್ಟವನ್ನು ಭರಿಸುವ ಶಕ್ತಿ ಕೊಡಲಿ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಹೀರಾಬೆನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇಶಕ್ಕೆ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರಂತಹ ಮಗನನ್ನು ನೀಡಿ, ಶತಾಯುಷಿಯಾಗಿ ಬದುಕಿ ಬಾಳಿ ದೇವರ ಚರಣ ಸೇರಿದ ಹೀರಾಬೆನ್ ಅವರಿಗೆ ಗೌರವಪೂರ್ವಕ ವಿದಾಯಗಳು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಪ್ರಧಾನಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಗೃಹಸಚಿವ ಅರಗ ಜ್ಞಾನೇಂದ್ರ ಟ್ವೀಟ್ ಮಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರು ದೈವಾಧೀನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ವಿಶ್ವದ ಅತ್ಯಂತ ಬಲಿಷ್ಠ ನಾಯಕನಿಗೆ ಜನ್ಮ ನೀಡಿದ ಆ ದಿವ್ಯ ಚೇತನಕ್ಕೆ ದೇವರು ಚಿರ ಶಾಂತಿ ಕರುಣಿಸಲಿ, ಅವರ ಕುಟುಂಬದ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ ಎಂದಿದ್ದಾರೆ.