ಯುವ ಜನತೆಯ ಪ್ರಗತಿಗೆ ಮುಳ್ಳಾದ ಗೇಮಿಂಗ್ ಆ್ಯಪ್‍ಗಳು ಹಾಗೂ ಸೋಷಿಯಲ್ ಮೀಡಿಯಾ…

1068
firstsuddi
  • ರಾಘವೇಂದ್ರ   ಕೆಸವಳಲು                                

ಬೆಳಗಾವಿಯ ಯುವಕ ರಘುವೀರ್ ವಯಸ್ಸು 25, ಪಬ್ ಜಿ ಗೇಮ್‍ನ ದಾಸನಾಗಿದ್ದ ಇವನು ತಂದೆಯ ಹಿತೋಪದೇಶವನ್ನು ತಪ್ಪಿಸಿಕೊಳ್ಳಲು ತಂದೆಯನ್ನೇ ಕೊಚ್ಚಿ ಕೊಂದು ಬಿಟ್ಟ. ಪಬ್ ಜಿ ಗೀಳಿಗೆ ಅಂಟಿಕೊಂಡಿದ್ದ ಮಧ್ಯಪ್ರದೇಶದ 16 ವರ್ಷದ ಬಾಲಕನೊಬ್ಬ ಸತತ 6 ಗಂಟೆಗಳ ಕಾಲ ಪಬ್ ಜಿ ಗೇಮ್ ಆಡಿದ್ದ ಪರಿಣಾಮ ಉಂಟಾದ ಒತ್ತಡ ಹಾಗೂ ಶಾಕ್‍ನಿಂದ ಹೃದಯಾಘಾತಕ್ಕೆ ತುತ್ತಾಗಿ ಪ್ರಾಣಬಿಟ್ಟ ಎಂದು ವೈದ್ಯರು ಅಭಿಪ್ರಾಯ ಪಟ್ಟರು. ಇನ್ನು ಉತ್ತರ ಪ್ರದೇಶದ ಮನ್‍ಕಕ್ಷ್ ಎಂಬ ಮೂರು ವರ್ಷದ ಪುಟ್ಟ ಬಾಲಕ ದಿನಕ್ಕೆ 8 ಗಂಟೆ ಮೊಬೈಲ್‍ನಲ್ಲೇ ಮುಳುಗಿರುತ್ತಾನೆ. ಸ್ವತಃ ವೈದ್ಯರೇ ಮಗುವಿನ ಈ ಪರಿಯ ಚಟ ನೋಡಿ ಬೆಚ್ಚಿಬಿದ್ದಿದ್ದಾರೆ.

ಮೇಲಿನ ಘಟನೆಗಳೆಲ್ಲಾ ಕೇವಲ ವರದಿಯಾದ ನಮ್ಮ ಮುಂದಿರುವ ಉದಾಹರಣೆಗಳು, ಆದರೆ ಇಂತಹ ಎಷ್ಟೋ ಸಾವಿರಾರು ಘಟನೆಗಳು ನಮ್ಮ ಆಸುಪಾಸಿನಲ್ಲಿಯೇ ಸಂಭವಿಸುತ್ತಿವೆ. ನಮ್ಮ ಯುವಜನತೆ ಬೇರಿಲ್ಲದೆ ಮರದ ಚಿಗುರುಗಳಾಗಿದ್ದಾರೆ. ಹೌದು, basic communicational ಉದ್ದೇಶಗಳೊಂದಿಗೆ ಅಭಿವೃದ್ದಿಗೊಂಡ ಮೊಬೈಲ್‍ಗಳು ಸ್ಮಾರ್ಟ್ ಫೋನ್‍ಗಳಾಗಿ ರೂಪಾಂತರಗೊಂಡು ನಮ್ಮೆಲ್ಲರ ಬದುಕನ್ನು ಸ್ಮಾರ್ಟ್ ಆಗಿಸಿರುವುದು ಮನೆಮಾತು. ಆದರೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿರುವ ಯುವ ಜನತೆಯ ಬದುಕು ಅಂಕೆಯಿಲ್ಲದೆ ದುರ್ಗತಿಯತ್ತ ಸಾಗುತ್ತಿದೆ. ಸ್ಮಾರ್ಟ್ ಪೋನ್‍ನ ಅತಿಯಾದ ಬಳಕೆ ಅದು ಬೆರಳ ತುದಿಯಲ್ಲೇ ತೆರೆದಿಡುವ ಜಗತ್ತು, ಗೇಮಿಂಗ್ ಸೌಲಭ್ಯ ಎಲ್ಲವೂ ಇಂದಿನ ಯುವ ಜನತೆಯನ್ನು ಸ್ಮಾರ್ಟ್ ಫೋನ್‍ಗೆ ಅಡಿಕ್ಟ್ ಮಾಡಿದೆ.
ಹಿಂದೆ ಕಪ್ಪು ಬಿಳುಪಿನ T.V ಪರದೆಯಲ್ಲಿ ರಾಮಾಯಣ, ಮಹಾಭಾರತ ಧಾರವಾಹಿಗಳಿಂದ ಮನರಂಜಿಸಿಕೊಂಡು ವಾರಕ್ಕೊಮ್ಮೆ ಬರುತ್ತಿದ್ದ ಚಿತ್ರಹಾರ್, ಚಿತ್ರಮಂಜರಿಗಳಲ್ಲಿ ಪ್ರೇಮಗೀತೆಗಳನ್ನು ನೋಡಿ ಪುಳಕಗೊಂಡು ಮನದಲ್ಲಿ ಮಧುರ ಭಾವನೆಗಳನ್ನು ಹೊಸೆದುಕೊಂಡು 25 ರಿಂದ 30 ಕಿ.ಮೀ ದೂರಕ್ಕೆಲ್ಲಾ ಪತ್ರ ಬರೆದುಕೊಂಡಿರುತ್ತಿದ್ದ ಯುವ ಜನತೆ ಇಂದು ಬೆರಳತುದಿಯ ಒಂದೇ ಟಚ್‍ಗೆ ಎಗ್ಗು ತಗ್ಗಿಲ್ಲದೆ ಸ್ಮಾರ್ಟ್ ಫೋನಿನ ಮೇಲೆ ಕುಣಿದಾಡುವ ಅಶ್ಲೀಲ ವೀಡಿಯೋಗಳು, ಅಹಿತಕರ ಟ್ರೋಲ್‍ಗಳನ್ನು ನೋಡುತ್ತಾ ಬದುಕಿನ ಕುತೂಹಲಗಳೆಲ್ಲವನ್ನೂ ಕಳೆದುಕೊಳ್ಳುತ್ತಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ಈ ಸಾಮಾಜಿಕ ಜಾಲತಾಣಗಳು ಉತ್ತಮ ಸಂವಹನ ಮಾಧ್ಯಮಗಳಾಗಿದ್ದರೂ ಅವುಗಳ ದಾಸರಾಗಿರುವ ಎಷ್ಟೋ ಯುವಕ ಯುವತಿಯರು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಇವುಗಳಿಂದಾಗಿ ನಾಶ ಮಾಡಿಕೊಳ್ಳುತ್ತಿದ್ದಾರೆ. ವಿಶ್ವ ವಿಖ್ಯಾತ ಜೋಗ ಜಲಪಾತದ ಮುಂದೆ ನಿಂತ ಸರ್ ಎಂ. ವಿಶ್ವೇಶ್ವರಯ್ಯನವರು ಓಹ್! ವಾಟ್ ಎ ವೆಸ್ಟ್, ಎಂದು ಉದ್ಗರಿಸಿ ಮುಂದೆ ಅದೇ ಧುಮ್ಮಿಕ್ಕುವ ಜಲಪಾತದಿಂದ ವಿದ್ಯುತ್ ತಯಾರಿಸಿ ದೇಶಕ್ಕೆಲ್ಲಾ ಬೆಳಕನ್ನು ನೀಡುವ ಕಾರ್ಯದ ರೂವಾರಿಯಾದರು. ಆದರೆ ಇಂದು ನಮ್ಮ ಯುವಜನತೆ ಇಂತಹ ಪ್ರಕೃತಿಯ ಸೊಬಗಿನ ಮುಂದೆ ನಿಂತು ಸೆಲ್ಫಿ ಗೀಳಿಗೆ ತುತ್ತಾಗಿ ಪ್ರಾಣವನ್ನು ತೆರುತ್ತಿದ್ದಾರೆ. ಆ ಕಾರಣದಿಂದಲೇ ಇವರು ಬೇರಿಲ್ಲದೆ ಮರದ ಚಿಗುರುಗಳಾಗಿರುವುದು.
ಇನ್ನು ಈ ಟ್ರೋಲಿಗರು ಮೊನ್ನೆ ತಾನೆ ಬೆಂಗಳೂರಿನ ಮೆಟ್ರೋ ಟ್ರೈನ್ ಒಂದರಲ್ಲಿ ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿಯನ್ನು ಓದುತ್ತಿದ್ದ ಟೆಕ್ಕಿ ಒಬ್ಬನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೇ ತಡ ಅವನ ಕನ್ನಡ ಪುಸ್ತಕಗಳ ಬಗೆಗಿನ ಅಭಿರುಚಿ ಹಾಗೂ ಪುಸ್ತಕ ಪ್ರೇಮವನ್ನೇ ತಮ್ಮ ಟ್ರೋಲಿಗೆ ಇಂಧನವನ್ನಾಗಿಸಿಕೊಂಡು ಅವನ ಉತ್ತಮ ಹವ್ಯಾಸವನ್ನೇ ಟ್ರೋಲಿನಲ್ಲಿ ಹರಿದು ಮುಕ್ಕಿದ್ದಾರೆ.

ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಾದ ಈ ಸ್ಮಾರ್ಟ್ ಫೋನ್ ಬಳಕೆ, ಅವರನ್ನು ಅಡಿಕ್ಟ್‍ಗಳಾಗಿಸಿ ಖಿನ್ನತೆ, ತನ್ಮೂಲಕ ಹಿಂಸಾ ಪ್ರವೃತ್ತಿ, ಅಪರಾಧಿಗಳಿಗೆ ಎಡೆಮಾಡಿಕೊಡುತ್ತಿದೆ. ಸದ್ಯಕ್ಕಂತೂ ನಮ್ಮಲ್ಲಿ ಈ ಜಾಲತಾಣಗಳು, ಗೇಮಿಂಗ್ ಆ್ಯಪ್‍ಗಳಿಗೆ ನಿರ್ಬಂಧ ಹೇರಲು ಯಾವುದೇ ಕಾನೂನು ಕ್ರಮಗಳಿಲ್ಲ. ಬೆಂಗಳೂರಿನಂತ ನಗರವೊಂದರಲ್ಲೇ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಪ್ರತಿದಿನ 8 ರಿಂದ 10 ಸ್ಮಾರ್ಟ್ ಫೋನ್ ಬಳಕೆಯಿಂದ ಖಿನ್ನತೆಗೆ ಒಳಗಾದ ಮಕ್ಕಳ ಪ್ರಕರಣಗಳು ಕೌನ್ಸೆಲಿಂಗ್‍ಗಾಗಿ ಬರುತ್ತಿದೆ. ಆನ್‍ಲೈನ್ ಗೇಮಿಂಗ್‍ನಷ್ಟೇ ಸೋಷಿಯಲ್ ಮೀಡಿಯಾ ಅಡಿಕ್ಟ್ ಕೂಡಾ ತೀರಾ ಅಪಾಯಕಾರಿಯಾಗಿದೆ. ಅಮೇಜಾನ್, ನೆಟ್‍ಫ್ಲಿಕ್ಸ್‍ಗಳಂತಾ ಮೀಡಿಯಾಗಳು ಅಪರಾಧ, ಲೈಂಗಿಕತೆಯನ್ನು ವೈಭವೀಕರಿಸಿ ಯುವ ಜನತೆಯ ಮನಸ್ಸನ್ನು ವಿಚಲಿತಗೊಳಿಸುತ್ತಿವೆ.
ಈ ನಿಟ್ಟಿನಲ್ಲಿ ಗುರುತರವಾದ ಜವಾಬ್ದಾರಿ ವಹಿಸಬೇಕಾಗಿರುವುದು ಪೋಷಕರು. ತಮ್ಮ ಮಕ್ಕಳ ಆಸಕ್ತಿಗಳ ಚಟುವಟಿಕೆಗಳ ಬಗ್ಗೆ ಗಮನ ನೀಡಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಒದಗಿಸಿಕೊಡಬೇಕು. ಮಕ್ಕಳಿಗೆ ಮೊಬೈಲ್‍ನಲ್ಲಿ ಆಡಬೇಡ, ಸ್ಮಾರ್ಟ್ ಫೋನ್ ಜಾಸ್ತಿ ಬಳಸಬೇಡ ಎಂದು ಹೇಳಿ ಹಿರಿಯರಾದ ನಾವೇ ಅವರ ಮುಂದೆ ಗಂಟೆಗಟ್ಟಲೇ ಮೊಬೈಲ್‍ನಲ್ಲಿ ಮುಳುಗಿದರೆ, ಸಾಮಾನ್ಯವಾಗಿ ಅವರೂ ನಮ್ಮನ್ನೇ ಅನುಕರಿಸುವುದರಲ್ಲಿ ಸಂದೇಹವೇ ಇಲ್ಲ. ಇದಕ್ಕೆ ಪರಿಣಾಮಕಾರಿ ಮದ್ದೆಂದರೆ ಮಕ್ಕಳೊಂದಿಗೆ ಬೆರೆಯುವುದು. ಬಿಜಿಯಾದ ಜೀವನ ಶೈಲಿಯಿಂದ ಮಕ್ಕಳೊಂದಿಗೆ ಕಳೆಯಲು ಸಮಯವಿರದಿದ್ದರೂ ದಿನದಲ್ಲಿ ಒಂದಷ್ಟು ಸಮಯ ಅವರೊಂದಿಗೆ ಕಳೆಯಬೇಕಿದೆ. ಸ್ಮಾರ್ಟ್ ಫೋನ್ ಹೊರತಾದ ಹವ್ಯಾಸಗಳು ಅಂದರೆ ಓದುವುದು, ಬರೆಯುವುದು, ಸಂಗೀತ ಕೇಳುವುದು ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಿದರೆ ಖಂಡಿತಾ ಈ ಸ್ಮಾರ್ಟ್ ಫೋನಿನಂತಹ ಗೀಳಿನಿಂದ ಅವರು ಹೊರಬಂದು ಭದ್ರ ಬೇರುಗಳೊಂದಿಗೆ ಅಭಿವೃದ್ದಿಯ ಚಿಗುರುಗಳಾಗಿ ನಮ್ಮ ಯುವಜನತೆ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ.