ಹೊನ್ನಾವರ: ವಾರದ ಹಿಂದೆ ಗರ್ಭಿಣಿ ಹಸುವನ್ನು ಬರ್ಬರವಾಗಿ ಕೊಂದ ದುರಂತ ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಫೈಸಲ್ ಕಾಲಿಗೆ ಗುಂಡು ಹಾರಿಸಲಾಗಿದೆ. ಖಚಿತ ವರದಿಯ ಮೇರೆಗೆ ಹೊನ್ನಾವರ ತಾಲ್ಲೂಕಿನ ಕಾಸರಕೋಡು ಬಳಿಯ ದುಗ್ಗೂರ್ ಕ್ರಾಸ್‍ನಲ್ಲಿ ಫೈಸಲ್ ನನ್ನು ತಡೆದ ಪೊಲೀಸರು ಆತನನ್ನು ಬಂಧಿಸಿದರು. ಬಂಧಿತ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ತಪ್ಪಿಸಿಕೊಳ್ಳಲು ಯತ್ನಿಸಿ ಹೊನ್ನಾವರದ ಪೊಲೀಸ್ ಇನ್ಸ್‍ಪೆಕ್ಟರ್ ಸಿದ್ಧರಾಮೇಶ್ವರ, ಸಬ್ ಇನ್ಸ್‍ಪೆಕ್ಟರ್ ರಾಜಶೇಖರ್ ವಂದಲಿ, ಕಾನ್‍ಸ್ಟೆಬಲ್‍ಗಳಾದ ಗಜಾನನ್ ನಾಯಕ್ ಮತ್ತು ಗಣೇಶ್ ಬದ್ನಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಫೈಸಲ್ ನನ್ನು ಸೆರೆ ಹಿಡಿದಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟೊಂಕ ನಿವಾಸಿಯಾದ ಈತ ಮತ್ತು ಅವನ ಸಹಚರರು ಹೊನ್ನಾವರದ ಸಾಲ್ಕೋಡ್ ಗ್ರಾಮ ಪಂಚಾಯತ್‍ನ ಕೊಂಡುಕುಳಿ ಗ್ರಾಮದಲ್ಲಿ ಗರ್ಭಿಣಿ ಹಸುವನ್ನು ಕೊಂದಿದ್ದಾರೆ ಎಂದು ತಿಳಿಸಲಾಗಿದೆ.