ರಾಜ್ಯಾದ್ಯಂತ ಆಯುಧಪೂಜೆ ಸಂಭ್ರಮ: ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಆರಂಭ…

56
firstsuddi

ಬೆಂಗಳೂರು: ಮೈಸೂರು ಅರಮನೆ ಸೇರಿದಂತೆ ರಾಜ್ಯಾದ್ಯಂತ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ ನವಮಿಯ ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಅರಮನೆಯಲ್ಲೇ ಬೆಳಗ್ಗೆಯಿಂದಲೇ ಆಯುಧ ಪೂಜೆಯ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಿವೆ.

ಬೆಳಿಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಮೈಸೂರು ಅರಮನೆಯಲ್ಲಿ ಪೂಜೆಗಳು ಆರಂಭಗೊಂಡಿವೆ. ಬೆಳಗ್ಗೆ 9.30ಕ್ಕೆ ಚಂಡಿಹೋಮಪೂರ್ಣಾಹುತಿ ಕಾರ್ಯಕ್ರಮ ಮುಕ್ತಾಯವಾಗಲಿದೆ. ಬೆಳಿಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಪಟ್ಟದ ಹಸು ಆಗಮಿಸಲಿದೆ. ಮಧ್ಯಾಹ್ನ 12.20 ನಿಮಿಷದಿಂದ ಮಧ್ಯಾಹ್ನ 12.45 ನಿಮಿಷದವರೆಗೆ ಆಯುಧ ಪೂಜೆ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ ನೆರವೇರಿಸಲಿದ್ದಾರೆ.

ಬಳಿಕ ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ. ಹೀಗೆ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರುತ್ತದೆ.

ನಾಳೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲಿದ್ದು, ಇದರೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು, ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದಿಂದ ನಮಿಸಲು ದೇಶ-ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಸಾಂಸ್ಕೃತಿಕ ನಗರಿಯತ್ತ ಧಾವಿಸಲಿದ್ದಾರೆ. ಇದಕ್ಕಾಗಿ ಅರಮನೆ ನಗರಿ ರಂಗೇರುತ್ತಿದೆ. ಮೈಸೂರು ದಸರಾ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ಅತಿಥಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಡ್‌ ಕಾರ್ಡ್‌ ಹಾಗೂ ಟಿಕೆಟ್‌ ಹೊಂದಿರುವವರಿಗೆ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.