ರಾಜ್ಯ ಬಜೆಟ್‍ನಲ್ಲಿ ಈ ಬಾರಿ ಬೆಂಗಳೂರಿಗೆ ಸಿಕ್ಕಿದ್ದೇನು?

61
firstsuddi

ಬೆಂಗಳೂರು : ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ 6000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಹೈಡೆನ್ಸಿಟಿ ಕಾರಿಡಾರ್ ಯೋಜನೆಯಲ್ಲಿ ಒಟ್ಟು 108 ಕಿ.ಮೀ ರಸ್ತೆಗಳನ್ನು 273 ಕೋಟಿ ರೂ,ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ.

ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 350 ಕೋಟಿ ರೂ. ವೆಚ್ಚದಲ್ಲಿ 5 ಕಿ.ಮೀ ಎಲಿವೇಟೆಡ್ ರಸ್ತೆ ನಿರ್ಮಾಣ ಹಾಗೂ ಸಬ್ ಅರ್ಬನ್ ರೈಲ್ವೆ ನಿಗಮದ ರೈಲು ಜಾಲದೊಂದಿಗೆ ಅಮನ್ವಯ ಸಾಧಿಸಿ ಯಶವಂತಪುರ ರೈಲು ನಿಲ್ದಾಣದಿಂದ ಮತ್ತಿಕೆರೆ ಹಾಗೂ ಬಿಇಎಲ್ ರಸ್ತೆಯವರೆಗೆ ಇಂಟಿಗ್ರೇಟೆಡ್ ಮೇಲ್ಸೇತುವೆ ನಿರ್ಮಿಸಿ ನೇರ ಸಂಪರ್ಕ ಒದಗಿಸಲಾಗುತ್ತದೆ. 1 ಸಾವಿರ ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ 120 ಕಿ.ಮೀ ಆರ್ಟೀರಿಯಲ್ ರಸ್ತೆಯ ವೈಟ್ ಟಾಪಿಂಗ್ ಹಾಗೂ ನಗರದ 300 ಕಿ.ಮೀ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳನ್ನು 450 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರವಾಹ ತಪ್ಪಿಸಲು ಒಟ್ಟು 195 ಕಿ.ಮೀ ಉದ್ದದ ಚರಂಡಿ ಮತ್ತು ಕಲ್ವರ್ಟ್ ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ 75 ಜಂಕ್ಷನ್ ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಬಿಬಿಎಂಪಿಗೆ ಸೇರ್ಪಡೆಯಾದ ಹೊರ ವಲಯದ 110 ಗ್ರಾಮಗಳ ರಸ್ತೆ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ. ಒದಗಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಒಟ್ಟು 56 ಕಿ.ಮೀಗಳ ಜಾಲವು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 30 ನಿಲ್ದಾಣಗಳೊಂದಿಗೆ 58.19 ಕಿ.ಮೀಗಳ ಮೆಟ್ರೋ ರೈಲು ಯೋಜನೆಯ ಕಾಮಗಾರಿಗಳು ಪ್ರಗತಿಯತಲ್ಲಿವೆ. ಈ ವರ್ಷದಲ್ಲಿ 40.15 ಕಿ.ಮೀ ಉದ್ದ ಮೆಟ್ರೋ ಮಾರ್ಗಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿದೆ.

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಗಳನ್ನು 5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ತೆಗೆದುಕೊಂಡಿದ್ದು, ಎಲ್ಲಾ ಕಾಮಗಾರಿಗಳು 2023-24ನೇ ಸಾಲಿನಲ್ಲಿ ಪೂರ್ಣಗೊಳಸಿಲಾಗುವುದು. ಮೆಗಾಸಿಟಿ ರಿವಾಲ್ವಿಂಗ್ ನಿಧಿಯಡಿ ದಿನಂಪ್ರತಿ ಒಟ್ಟು 440 ದಶಲಕ್ಷ ಲೀಟರ್ ತ್ಯಾಜ್ಯನೀರಿನ ಸಂಸ್ಕರಣಾ ಸಾಮರ್ಥ್ಯದ ನಾಲ್ಕು ಹೊಸ ಘಟಕಗಳ ಕಾಮಗಾರಿಯನ್ನು 1200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸಲಾಗುವುದು. ಈ ಉದ್ದೇಶಕ್ಕಾಗಿ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ಗಳನ್ನು ಅನುಮೋದಿಸಲಾಗಿದೆ. ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗಾಗಿ 180 ಕೋಟಿ ರೂ.ಗಳ ಯೋಜನೆ. ಬೆಂಗಳೂರಿನ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ 250 ಸುಸಜ್ಜಿತ ಶಿ ಟಾಯ್ಲೆಟ್ ಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.