ರಾಜ್ಯ ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ : ಸಿಎಂ ಬೊಮ್ಮಾಯಿ.

59
firstsuddi

ಬೆಳಗಾವಿ : ರಾಜ್ಯ ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹಲವಾರು ಇಲಾಖೆಗಳ ಸಭೆ ನಡೆಸಲಾಗಿದೆ. ಸೋಮವಾರ, ಮಂಗಳವಾರ ಮತ್ತೆ ಸಭೆ ನಡೆಸುತ್ತೇನೆ. ಇದೆಲ್ಲ ಮುಗಿದ ಮೇಲೆ ಫೆ.25ರ ಬಳಿಕ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಗರದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರ ಯೋಜನೆ ಕೂಡ ಗಮನಿಸಿ ಮುಂದಿನ ಬಜೆಟ್ ಮಂಡಿಸುತ್ತೇನೆ. ಬಜೆಟ್ ನಲ್ಲಿ ಏನ್ ಮಾಡುತ್ತೇನೆ ಅಂತಾ ಈಗ ಹೇಳಲು ಸಾಧ್ಯವಿಲ್ಲ ಎಂದರು.

ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕೇಸ್ ಕೋರ್ಟ್ ನಲ್ಲಿದೆ. ಪ್ರತಿದಿನವೂ ವಿಚಾರ ನಡೆಯುತ್ತಿದೆ. ಈಗಾಗಲೇ ಕೋರ್ಟ್ ಮಧ್ಯಂತರ ಆದೇಶವನ್ನು ಕೊಟ್ಟಿದೆ. ಹೀಗಾಗಿ ನಮ್ಮ ಮೊದಲ ಆದ್ಯತೆ ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಭೀತಿ ಮೂಡದಂತೆ ಶಾಲಾ ಕಾಲೇಜುಗಳು ನಡೆಯಬೇಕು ಎಂದರು.

ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿರುವ ಬೆಳಗಾವಿಯಲ್ಲಿನ 750 ಎಕರೆ ಜಾಗದ ಕುರಿತು ಚರ್ಚಿಸಿದ್ದೇನೆ. ಅದರ ಸಂಪೂರ್ಣ ಮಾಹಿತಿ ತರಿಸಿ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.