ಲಕ್ನೊ/ಪಣಜಿ/ಡೆಹ್ರಾಡೂನ್ : ಗೋವಾ, ಉತ್ತರಾಖಂಡ್, ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಾರಂಭವಾಗಿದೆ. ಉತ್ತರ ಪ್ರದೇಶ ಹಾಗೂ ಗೋವಾದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಉತ್ತರಾಖಂಡದಲ್ಲಿ 8ಗಂಟೆಯಿಂದ ಮತದಾನ ಆರಂಭಗೊಂಡಿದೆ.
ಇಂದಿನ ಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ, ಮಾಜಿ ಸಿಎಂ ಹರೀಶ್ ರಾವತ್, ಸಮಾಜವಾದಿ ಪಕ್ಷದ ಆಜಂ ಖಾನ್ ಸೇರಿ ಹಲವರು ಇಂದು ಚುನಾವಣಾ ಕಣದಲ್ಲಿದ್ದಾರೆ.
ಇಂದು ಚುನಾವಣೆ ನಡೆಯುತ್ತಿರುವ ಮೂರು ರಾಜ್ಯಗಳಲ್ಲಿಯೂ ಸದ್ಯ ಬಿಜೆಪಿ ಆಡಳಿತವೇ ಇದ್ದು, ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿ ಬಿಜೆಪಿಯಿದೆ. ಉತ್ತರಪ್ರದೇಶದಲ್ಲಿ ಮಾ.10ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಈಗ ಎರಡನೇ ಹಂತದಲ್ಲಿ 9 ಜಿಲ್ಲೆಗಳ 55 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗೋವಾದಲ್ಲಿ 40 ವಿಧಾನಸಭೆ ಕ್ಷೇತ್ರಗಳಿದ್ದು, 301 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗೇ, 11 ಲಕ್ಷ ಮತದಾರರು ಇದ್ದಾರೆ. ಇನ್ನು ಉತ್ತರಾಖಂಡ್‍ನಲ್ಲಿ 70 ವಿಧಾನಸಭೆ ಕ್ಷೇತ್ರಗಳಿದ್ದು, ಒಟ್ಟು 632 ಜನ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ 152 ಮಂದಿ ಸ್ವತಂತ್ರ್ಯ ಅಭ್ಯರ್ಥಿಗಳು. 81 ಲಕ್ಷ ಮತದಾರರು ಇದ್ದಾರೆ. ಮಾ.10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊಬೀಳಲಿದೆ.










