ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಘಟನೆ ಸಂಬಂಧ ಎನ್ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸಿದ ಎನ್ಐಎ ಇಂದಿನಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದೆ.
ದೇಶದ ಒಳಗಡೆ ಯಾವುದೇ ಉಗ್ರ ಚಟುವಟಿಕೆ, ಬಾಂಬ್ ಸ್ಫೋಟದ ತನಿಖೆಯನ್ನು ಎನ್ಐಎ ವಹಿಸಿಕೊಳ್ಳುತ್ತದೆ. ಈ ಹಿಂದೆ ಬೇರೆ ರಾಜ್ಯದಲ್ಲಿ ಹಲವು ಪ್ರಕರಣಗಳಿಗೆ ಹೊಸ ಪ್ರಕರಣಗಳು ಸಾಮ್ಯತೆ ಮತ್ತು ಆರೋಪಿಗಳು ಭಾಗಿಯಾಗಿರುವುದರಿಂದ ಎನ್ಐಎ ಈ ಪ್ರಕರಣಗಳನ್ನು ಬೇಧಿಸುತ್ತದೆ. ಈ ಕಾರಣಕ್ಕೆ ರಾಜ್ಯಗಳು ಉಗ್ರ ಕೃತ್ಯದಂತಹ ಪ್ರಕರಣಗಳು ದಾಖಲಾದಾಗ ಅದನ್ನು ಕೇಂದ್ರ ಸರ್ಕಾರದ ಅಡಿಯಲ್ಲಿರುವ ಎನ್ಐಎಗೆ ವರ್ಗಾಯಿಸುತ್ತದೆ. ಎಲ್ಲಾ ರಾಜ್ಯಗಳ ಗೃಹ ಇಲಾಖೆ ಎನ್ಐಎ ತನಿಖೆಗೆ ಸಹಕಾರ ನೀಡುತ್ತದೆ.
ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆಗಾಗಿ ಪೊಲೀಸರು ಹರಸಾಹಸ ಪಡ್ತಿದ್ದಾರೆ. ಟೈಮ್ ಟ್ರಾವೆಲ್ ರೀತಿ ಎರಡೂ ಕಡೆ ಹುಡುಕಾಟ ನಡೆಸ್ತಿದ್ರೂ, ಆರೋಪಿಯ ಜಾಡು ಮಾತ್ರ ಸಿಗ್ತಿಲ್ಲ. ಆರೋಪಿ ಪತ್ತೆ ಆಗದಿದ್ರೆ ಪೊಲೀಸರು ರೇಖಾಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ.
ರಾಮೇಶ್ವರ ಕೆಫೆಗೆ ಒಂದು ಕಿಮೀ ಇರುವ ಒಂದು ಸ್ಥಳದಲ್ಲಿ ಸಿಸಿಟಿವಿಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಆದ್ರೆ, ಗ್ರಾಫೈಟ್ ಇಂಡಿಯಾ ಸರ್ಕಲ್ ನಲ್ಲಿ ರೋಡ್ ಕ್ರಾಸ್ ಮಾಡಿ ಬಂದು ಬಸ್ ಏರಿದ್ದಾನೆ. ಆದ್ರೆ ಅದಕ್ಕಿಂತ ಹಿಂದೆ ಯಾವ ಕಡೆಯಿಂದ ಬಂದ? ಯಾವ ವಾಹನದಲ್ಲಿ ಬಂದ? ಯಾರಾದ್ರು ಡ್ರಾಪ್ ಮಾಡಿದ್ರಾ? ಅನ್ನೊದನ್ನು ಪತ್ತೆ ಮಾಡಲು ಯತ್ನಿಸಲಾಗಿದೆ. ಆದ್ರೆ, ಬಾಂಬ್ ಇಡಲು ಯಾವ ದಾರಿಯಲ್ಲಿ ಬಂದಿದ್ದನೋ ಅದೇ ದಾರಿಯಲ್ಲಿ ವಾಪಾಸ್ ಹೋಗಿಲ್ಲ. ಮುಂದೆ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೊದು ಮಾಹಿತಿ ಇಲ್ಲ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸೇರಿ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 3 ಪ್ರಮುಖ ಸ್ಫೋಟಗಳು ಸಂಭವಿಸಿವೆ. ಈ ಮೂರೂ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿದ್ದು, ಎಲ್ಲಾ ಕಡೆ ಒಬ್ಬನೇ ಆಪರೇಟ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.










