ಬೆಂಗಳೂರು: ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮರಿಯಪ್ಪ ( 70 ) ಮುನಿಯಮ್ಮ ( 60 ) ಮತ್ತು ಭಾರತಿ ( 40 ) ಮೃತ ದುರ್ದೈವಿಗಳು. ಮಧ್ಯಾಹ್ನ ಊಟ ಮಾಡಿ ಕೈ ತೊಳೆಯಲು ಹೋದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಬುದ್ದಿಮಾಂದ್ಯಳಾಗಿದ್ದ ಮಗಳು ಭಾರತಿ ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ಆಕೆಯ ಹೆತ್ತವರು ಸಹ ನೀರುಪಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










