ನವದೆಹಲಿ : ತಮ್ಮ ಅಳಿಯ ಉನ್ನತ ಹುದ್ದೆಗೇರಿರುವುದು ಹೆಮ್ಮೆ ತಂದಿದೆ ಎಂದು ಮಾವ ಇನ್ಫೋಸೀಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.
42 ವರ್ಷದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಮಾವ ನಾರಾಯಣ ಮೂರ್ತಿಯವರು, ಮೊದಲು ರಿಷಿಗೆ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಅಲ್ಲದೆ ಅವರಿಗೆ ಯಶಸ್ಸನ್ನು ಬಯಸುತ್ತೇವೆ. ಬ್ರಿಟನ್ ಜನರಿಗೆ ರಿಷಿ ತಮ್ಮ ಕೈಲಾದಷ್ಟು ಒಳ್ಳೆಯದು ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರಿಂದ, ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ನೂತನ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಜೊತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ನಿಂತಿದ್ದ ಪೆನ್ನಿ ಮೊರ್ಡೌಂಟ್ ಸಂಸದರ ಬೆಂಬಲದ ಬಹುಮತ ಸಿಗದೆ, ರೇಸ್ ನಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ರಿಷಿ ಸುನಕ್ 100ಕ್ಕೂ ಹೆಚ್ಚು ಸಂಸದರ ಬೆಂಬಲದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.










