ಮುಂಬೈ: ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ ಮುಂಬೈ ಕೋರ್ಟ್ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ. ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಯನ್ನು ಐಪಿಸಿ (IPಅ) ಸೆಕ್ಷನ್ 354 ಹಾಗೂ ಲೈಂಗಿಕ ಅಪರಾಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮೂಲಗಳ ಪ್ರಕಾರ, ಜುಲೈ 14, 2015ರಂದು 16 ವರ್ಷದ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಯುವಕ ಅವಳ ಕೂದಲು ಎಳೆದು ‘ಕ್ಯಾ ಐಟಂ ಕಿದರ್ ಜಾ ರಹೀ ಹೋ?’ ಎಂದು ಹೇಳಿದ್ದಾನೆ. ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿ ಸಂಬೋಧಿಸುವ ಸಾಮಾನ್ಯ ಪದವಾಗಿದೆ, ಜೊತೆಗೆ ಅತಿರೇಕದ ವರ್ತನೆಯನ್ನು ತೋರುತ್ತದೆ. ಇಂತಹ ಅಪರಾಧಗಳನ್ನು ಕಠಿಣ ಕ್ರಮಗಳ ಮೂಲಕ ನಿಭಾಯಿಸಬೇಕಿದೆ. ಜೊತೆಗೆ ರೋಡ್ ರೋಮಿಯೋಗಳಿಗೆ ತಕ್ಕಪಾಠ ಕಲಿಸುವ ಜೊತೆಗೆ ಮಹಿಳೆಯರನ್ನು ರಕ್ಷಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.










