ಮಂಡ್ಯ: ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದ ಹೆಂಡತಿಯ ಗೀಳಿನಿಂದ ಬೇಸತ್ತ ಗಂಡ ಆಕೆಯನ್ನು ಕೊಲೆ ಮಾಡಿ ಕಾವೇರಿ ನದಿಗೆ ಎಸೆದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಪೂಜಾ (26) ಪತಿಯಿಂದ ಕೊಲೆಯಾದ ಮಹಿಳೆಯಾಗಿದ್ದು, ಶ್ರೀನಾಥ್ (33) ವೇಲ್‌ನಿಂದ ತನ್ನ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಪೂಜಾ ಹಾಗೂ ಶ್ರೀನಾಥ್ 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಒಂದು ಹೆಣ್ಣುಮಗು ಇದೆ. ಕಳೆದ ಕೆಲವು ವರ್ಷಗಳಿಂದ ಪೂಜಾ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು. ರೀಲ್ಸ್ ಮಾಡುವ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್ ಹುಚ್ಚನ್ನೂ ಬೆಳೆಸಿಕೊಂಡಿದ್ದಳು. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಗಂಡನಿಗೆ ಅನುಮಾನ ಶುರುವಾಗಿದ್ದು, ಈ ವಿಚಾರವಾಗಿಯೇ ಗಂಡ ಹೆಂಡತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.
ಪರಪುರುಷರೊಂದಿಗೆ ಸಂಬಂಧದ ಶಂಕೆಯಿಂದ ಜಗಳ ತೆಗೆಯುತ್ತಿದ್ದ ಶ್ರೀನಾಥ್, ಪೂಜಾಳ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಹತ್ಯೆಮಾಡಿದ್ದಾನೆ. ಕೊಲೆಗೈದ ಬಳಿಕ ಶ್ರೀನಾಥ್ ಮಾವ ಶೇಖರ್ ಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದು, ಮಗಳ ಹತ್ಯೆಯ ಬಗ್ಗೆ ತಿಳಿದರೂ ಮಾವ ಪೊಲೀಸರಿಗೆ ಹೇಳದೆ ಅಳಿಯನಿಗೆ ಸಾಥ್ ನೀಡಿದ್ದಾರೆ. ಪೂಜಾಳ ತಂದೆ ಅಳಿಯನೊಂದಿಗೆ ಸೇರಿ ಆಕೆಯ ಮೃತದೇಹವನ್ನು ಮನೆಯಿಂದ ಬೈಕ್‌ನಲ್ಲಿ ಸಾಗಿಸಿ ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲನ್ನು ಕಟ್ಟಿ ಕಾವೇರಿ ನದಿಗೆ ಎಸೆದಿದ್ದಾರೆ.
ಪತ್ನಿಯನ್ನು ಕೊಲೆಗೈದು ಶ್ರೀನಾಥ್ ಮನೆಯಲ್ಲಿಯೇ ಇದ್ದ. ಮಗಳ ಶವವನ್ನು ನದಿಗೆಸೆದ ಬಳಿಕ ಮಾವ ರಾಜಶೇಖರ್ ಹೊಟೇಲ್ ಕೆಲಸದಲ್ಲಿ ತೊಡಗಿಕೊಂಡಿದ್ದ. ಇನ್ನು ಶ್ರೀನಾಥ್ ನಿಮಿಷಾಂಬ ದೇವಸ್ಥಾನಕ್ಕೆ ಹೋಗಿಬರುವುದಾಗಿ ತೆರಳಿ ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದು, ಅಲ್ಲದೇ ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅರಕೆರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










