ಲಕ್ನೋ: ಉತ್ತರ ಪ್ರದೇಶದ ಸಂಭಾಲ್‍ನ ಬಿಜೆಪಿ ಮುಖಂಡ ಅನುಜ್ ಚೌಧರಿ ಅವರನ್ನು ಮೊರಾದಾಬಾದ್‍ನಲ್ಲಿರುವ ಅವರ ನಿವಾಸದ ಹೊರಗೆ ನಿನ್ನೆ ಸಂಜೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
34 ವರ್ಷದ ಶ್ರೀ ಚೌಧರಿಯವರು ತಮ್ಮ ಅಪಾರ್ಟ್‍ಮೆಂಟ್‍ನ ಹೊರಗೆ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚೌಧರಿ ಮೇಲೆ ಅನೇಕ ಬಾರಿ ಗುಂಡು ಹಾರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೂಡಲೇ ಅವರನ್ನು ಮೊರಾದಾಬಾದ್‍ನ ಬ್ರೈಟ್‍ಸ್ಟಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿರುವ ಚೌಧರಿ ಅವರು ಸಂಭಾಲ್‍ನ ಅಸ್ಮೋಲಿ ಬ್ಲಾಕ್‍ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸಿದರು ಆದರೆ ಯಶಸ್ವಿಯಾಗಿರಲಿಲ್ಲ. ಸದ್ಯ ಚೌಧರಿ ಹತ್ಯೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಕುಟುಂಬ ಗಂಭೀರ ಆರೋಪ ಮಾಡಿದೆ. ಅಲ್ಲದೆ ಅಮಿತ್ ಚೌಧರಿ ಮತ್ತು ಅನಿಕೇತ್ ಎಂಬ ಇಬ್ಬರ ಹೆಸರನ್ನು ಕೂಡ ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ.










