ತುಮಕೂರು : ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂಬ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿರುದ್ಧ ತುಮಕೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಸೆ. 21ರಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರೆಂದು ಕರೆದಿದ್ದರು. ಇದರ ವಿರುದ್ಧ ಮೊದಲು ತುಮಕೂರು ತಾಲ್ಲೂಕಿನ ವಕೀಲ ರಮೇಶ್ ನಾಯಕ್ ಅವರು ಡಿಜಿ ಮತ್ತು ಐಜಿ ಅವರಿಗೆ ಇಮೇಲ್ ಮೂಲಕ ದೂರನ್ನು ಸಲ್ಲಿಸಿದ್ದರು. ಆದರೆ ಪೊಲೀಸರು ದೂರನ್ನು ದಾಖಲಿಸಿಕೊಳ್ಳದೇ ಇದ್ದುದರಿಂದ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಐಪಿಸಿ ಸೆಕ್ಷನ್ 153(ಎ), 504, 108ರ ಅಡಿಯಲ್ಲಿ ದೂರನ್ನು ದಾಖಲಿಸಿದ್ದರು. ನ್ಯಾಯಾಲಯದ ನ್ಯಾಯಾಧಿಶರಾದ ವಿನೋದ ಬಾಲ ನಾಯಕ್ ಅವರು ನಟಿ ಕಂಗನಾ ವಿರುದ್ಧ ಅ. 9ರಂದು ಎಫ್ಐಆರ್ ದಾಖಲಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಆದೇಶ ಪ್ರತಿ ನಿನ್ನೆ ಸಂಜೆ ತಲುಪಿದ್ದು, ಇಂದು ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿದರು. ಈ ಕುರಿತು ನಾಳೆ ವಕೀಲ ರಮೇಶ್ ನಾಯ್ಕ್ ಅವರಿಗೆ ಹೇಳಿಕೆ ನೀಡಲು ಸಮ್ಮನ್ಸ್ ಜಾರಿ ಮಾಡಲಾಗಿದೆ.










