ಹುಬ್ಬಳ್ಳಿ: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಅನೇಕ ಸೆಲೆಬ್ರೆಟಿಗಳಿಗೆ ಈಗಾಗಲೇ ಅರಣ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಅವರ ಕೊರಳಿನಲ್ಲಿಯೂ ಉಗುರಿನ ಪೆಂಡೆಂಟ್ ಪತ್ತೆಯಾಗಿದೆ.
ಮದುವೆ ಸಮಯದಲ್ಲಿ ಫೋಟೋಶೂಟ್ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕನ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿ ಮಠ ಅವರು ರಾಜಕೀಯ ವಲಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಅಂತಲೇ ಫೇಮಸ್. ಈ ಹಿಂದೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆಗಿದ್ದ ರಜತ್, ಇದೀಗ ಹುಲಿ ಉಗುರು ಪೆಂಡೆಂಟ್ ಧರಿಸಿರುವ ವಿಚಾರಕ್ಕೆ ಪೇಚಿಗೆ ಸಿಲುಕಿಕೊಂಡಂತಾಗಿದೆ.










