ಲಾಕ್‍ಡೌನ್ ಬಗ್ಗೆ ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ : ಸಚಿವ ಸುಧಾಕರ್.

87
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಶುರುವಾಗಿದ್ದು, ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು, ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಮಾಡುವ ಪ್ರಸ್ತಾಪ ಸರ್ಕಾರ ಮುಂದೆ ಇಲ್ಲ. ಒಂದು ವೇಳೆ ಲಾಕ್‍ಡೌನ್ ಕುರಿತಂತೆ ವದಂತಿ ಹಬ್ಬಿಸಿದವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಜನ ಬಹಳ ನಷ್ಟ ಅನುಭವಿಸುದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ, ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಿಸಬಾರದು. ಮಾಧ್ಯಮಗಳು ಎಚ್ಚರಿಕೆ, ಜಾಗೃತಿ ಕೊಡುವ ಕೆಲಸ ಮಾಡುತ್ತಿದೆ ಅದನ್ನು ಮುಂದುವರೆಸಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ 12 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. ಎಲ್ಲರನ್ನೂ ಸಹ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 12-13 ದಿನಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಆಫ್ರಿಕಾದಲ್ಲಿ ಇರುವ ನನ್ನ ವೈದ್ಯ ಸ್ನೇಹಿತರ ಜೊತೆ ಮಾತಾಡಿದ್ದೇನೆ. ಹೊಸ ತಳಿ ಬೇಗ ಹರಡುತ್ತದೆ. ಆದರೆ ಡೆಲ್ಟಾ ಅಷ್ಟು ಭೀಕರತೆ ಇರುವುದಿಲ್ಲ. ವಾಂತಿ, ಪಲ್ಸ್ ರೇಟ್ ಜಾಸ್ತಿಯಾಗುವುದು, ತಲೆ ಸುತ್ತುವುದು, ಆಯಾಸ ಆಗುವುದು ಇದು ಹೊಸ ತಳಿ ರೋಗ ಲಕ್ಷಣಗಳಾಗಿದೆ. ಹೊಸ ತಳಿ ಡೆಲ್ಟಾಗಿಂತ ತೀವ್ರತೆ ಕಡಿಮೆ ಇರುತ್ತದೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ.