ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್‍ನಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು, ಸಾವಿರಾರು ಮನೆಗಳು ಸುಟ್ಟು ಭಸ್ಮವಾಗಿದೆ. ಲಾಸ್ ಏಂಜಲೀಸ್‍ನ ಉತ್ತರಕ್ಕೆ ಕಡಿದಾದ ಪರ್ವತಗಳಲ್ಲಿ ಬೃಹತ್ ಮತ್ತು ವೇಗವಾಗಿ ಕಾಡ್ಗಿಚ್ಚು ವ್ಯಾಪಿಸಿದೆ. 1 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವ ಆದೇಶಗಳು ಮತ್ತು ಎಚ್ಚರಿಕೆಗಳು ಬಂದಿವೆ. ಇದುವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಭೂಮಿ ಮತ್ತು ವಾಯುವಿನ ಮೇಲೆ ಕಾಡ್ಗಿಚ್ಚು ಪ್ರಭಾವ ತೀವ್ರ ಕಾಡುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳು, ವ್ಯಾಪಾರ ಮಳಿಗೆಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಹ್ಯೂಸ್ ಬೆಂಕಿಯು ಬೆಳಗಿನ ಜಾವದಲ್ಲಿ ಆವರಿಸಿದ್ದು 6 ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳಲ್ಲಿ ಮರಗಳು ಮತ್ತು ಪೊದೆಗಳನ್ನು ಸುಟ್ಟುಹಾಕಿದೆ. ಇಂದು ನಾವು ಇರುವ ಪರಿಸ್ಥಿತಿಯು 16 ದಿನಗಳ ಹಿಂದೆ ನಾವು ಇದ್ದ ಪರಿಸ್ಥಿತಿಗಿಂತ ಬಹಳ ಭಿನ್ನವಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಅಗ್ನಿಶಾಮಕ ಮುಖ್ಯಸ್ಥ ಆಂಥೋನಿ ಮರ್ರೋನ್ ಹೇಳಿದ್ದಾರೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ.










