ಲೈಂಗಿಕ ದೌರ್ಜನ್ಯ; ಅಫ್ಘಾನಿಸ್ತಾನಕ್ಕಿಂತಲೂ ಕಡೆಯಾಯಿತೇ ಭಾರತ?

573
firstsuddi

ಡಾ. ಎಂ.ಎಸ್. ಮಣಿ

ಅತ್ಯಾಚಾರ ಪ್ರಕರಣ ಸಾಬೀತಿಗೆ ವೈದ್ಯಕೀಯ ಸಾಕ್ಷ್ಯಕ್ಕಿಂತ ಸಂತ್ರಸ್ಥೆಯ ಸಾಕ್ಷ್ಯ ನ್ಯಾಯಾಲಯಕ್ಕೆ ವಿಶ್ವಾಸ ಮೂಡಿಸುವಂತಿದ್ದರೆ ಸಾಕು. ವೈದ್ಯಕೀಯ ದೃಢೀಕರಣ ಅಗತ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟಿನ ನ್ಯಾ. ರವಿ ಮಳಿಮಠ ಮತ್ತು ನ್ಯಾ. ಎಚ್.ಪಿ. ಸಂದೇಶ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ನೀಡಿದೆ. ಪ್ರಕರಣ ನಡೆದಿರುವುದು 2013ರ ಏಪ್ರಿಲ್ 4ರಂದು. ಅಂದರೆ ನಿರ್ಭಯಾ ಪ್ರಕರಣಕ್ಕೂ ಮುಂಚಿತವಾಗಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ಇಲ್ಲಿನ ವಾಸಿ ಗೌರಮ್ಮ ಕೂಲಿ ಕೆಲಸಕ್ಕೆ ಹೊರ ಹೋಗಿದ್ದಾಗ ಆಕೆಯ 16 ವರ್ಷದ ಮಗಳ ಮೇಲೆ ನೆರೆಮನೆಯ ರಾಜು ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ಚಿಕ್ಕಮಗಳೂರು ಪ್ರಧಾನ ಸೆಷನ್ಸ್ ನ್ಯಾಯಾಲಯದ ಮುಂದೆ ಬಂದಿತ್ತು. 2013ರ ಮಾರ್ಚ್ 5ರಂದು ಪ್ರಕರಣದಲ್ಲಿ ವೈದ್ಯಕೀಯ ಸಾಕ್ಷ್ಯಗಳು ಇಲ್ಲ. ಗೌರಮ್ಮ ಹಾಗೂ ರಾಜು ನಡುವೆ ಕೌಟುಂಬಿಕ ಕಲಹವಿದೆ. ಆ ದ್ವೇಷಕ್ಕೆ ಸುಳ್ಳು ಪ್ರಕರಣ ಹೂಡಲಾಗಿದೆ ಎಂದು ರಾಜುವನ್ನು ಖುಲಾಸೆಗೊಳಿಸಲಾಗಿತ್ತು. ಹೈಕೋರ್ಟಿನ ವಿಭಾಗೀಯ ಪೀಠ ಸಂತ್ರಸ್ಥೆಯ ಸಾಕ್ಷ್ಯವು ಅತ್ಯಂತ ಸ್ಪಷ್ಟ ಹಾಗೂ ಸ್ಥಿರತೆಯಿಂದ ಕೂಡಿದೆ, ಅದು ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುತ್ತದೆ. ಆದ್ದರಿಂದ ರಾಜು `ಅತ್ಯಾಚಾರ ದೋಷಿ’ ಎಂದು ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎರಡು ಲಕ್ಷ ದಂಡವನ್ನು ಸಂತ್ರಸ್ಥೆಗೆ ಪಾವತಿಸಲು ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಹೊಸ ಭರವಸೆಯನ್ನು ಮೂಡಿಸಿದೆ. ಇದೇ ರೀತಿ ದೆಹಲಿ ಹೈಕೋರ್ಟ್ ಅತ್ಯಾಚಾರ ಎಸಗಿದ ಧೂರ್ತನಿಗೆ ಜಾಮೀನು ನೀಡುವ ಕುರಿತಂತೆ, ಸಂತ್ರಸ್ಥೆಯೇ ನಿರ್ಧರಿಸಬೇಕೆಂದು ತೀರ್ಪು ನೀಡಿತ್ತು. ಇಂತಹ ತೀರ್ಪು ಮಹಿಳೆಯರ ಪಾಲಿಗೊಂದು `ವರದಾನ’ ಎಂದೇ ಹೇಳಬಹುದು.
ಆದರೆ, ಉತ್ತರ ಪ್ರದೇಶದ ಆಲಿಗಡದಲ್ಲಿ 2 ವರ್ಷದ ಬಾಲಕಿಯನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲಲಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಂದು ಚರಂಡಿಗೆ ಎಸೆದಿದ್ದಾರೆ. ಜಾರ್ಖಂಡ್‍ನ ಜಮ್ಷೆಡ್‍ಪುರದ ರೈಲು ನಿಲ್ದಾಣದಲ್ಲಿ ತಾಯಿ ಜೊತೆ ಮಲಗಿದ್ದ 3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಬಳಿಕ ಮಗುವಿನ ತಲೆ ಕತ್ತರಿಸಿ ಹತ್ಯೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಕಠುವಾದಲ್ಲಿ 8 ವರ್ಷದ ಕುರಿಗಾಹಿ ಬಾಲಕಿಯನ್ನು ಹೊತ್ತೊಯ್ದು ಮತ್ತು ಬರಿಸುವ ಔಷಧ ನೀಡಿ ಗ್ರಾಮದ ದೇಗುಲದ ಆವರಣದಲ್ಲೇ ಸತತ 4 ದಿನ ಇಟ್ಟುಕೊಂಡು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಇದೇ ರೀತಿ ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ 14 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಬೆಂಕಿ ಇಟ್ಟು ಕೊಲ್ಲಲಾಗಿದೆ. ಕರ್ನಾಟಕದ ವಿಜಯಪುರ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿ ದಾನಮ್ಮಳನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹಿಂಸಿಸಿ ಕೊಲ್ಲಲಾಗಿದೆ. ಈ ಪ್ರಕರಣಗಳಲ್ಲಿ `ಹತ್ಯಾಚಾರ’ಕ್ಕೊಳಗಾದ ಸಂತ್ರಸ್ಥೆಪೀಡಕನನ್ನು ಗುರ್ತಿಸಲು ಸಾಧ್ಯವಾಗಲೇ ಇಲ್ಲ.

ಹೀಗೆ ದುರ್ಘಟನೆಗಳನ್ನು ಉದಾಹರಿಸುತ್ತಾ ಹೊರಟರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತದೆ. ಅಲ್ಲದೆ, ಅತ್ಯಾಚಾರಕ್ಕೊಳಗಾಗಿ ಉಸಿರು ಬಿಗಿಹಿಡಿದುಕೊಂಡವರ ತಲೆಯ ಮೇಲೆ ತೂಗುಗತ್ತಿಯಂತೆ ತೂಗಲಾರಂಭಿಸುತ್ತದೆ. ಆದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆಯೂ ಮಾಡಬಹುದು. ಜೊತೆಗೆ ಅಪರಾಧಿಕ ಕಾನೂನು ವ್ಯವಸ್ಥೆಯಿಂದ ದೂರ ಉಳಿಯುವಂತೆಯೂ ಮಾಡಬಹುದು.
ಹೀಗಾಗಿ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ಹತ್ಯೆಗೊಳಗಾಗದೆ ಬದುಕುಳಿದರೆ, ದೂರು ದಾಖಲಿಸುವ ಮುನ್ನ ಹಲವು ಬಾರಿ ಯೋಚಿಸುವ ಸ್ಥಿತಿ ಇದೆ. ಕಾರಣ, ದೂರು ದಾಖಲಿಸುವವರಿಂದ ಉದ್ಭವವಾಗುವ ಬೆದರಿಕೆ-ಹಲ್ಲೆ, ಪೋಲೀಸರನಿರ್ಲಕ್ಷ್ಯ-ಅಸಡ್ಡೆ, ನೆರೆಹೊರೆಯವರ ಕುಹಕನುಡಿ, ನೆಂಟರಿಷ್ಠರ ಕೊಂಕುಮಾತುಗಳು, ನ್ಯಾಯಾಲಯದ ಹೊರಗಡೆ ನಡೆಯುವ ರಾಜಿ ಪಂಚಾಯ್ತಿ, ಪ್ರಕರಣದ ಎಳೆದಾಡುವಿಕೆ, ಇತ್ಯರ್ಥಕ್ಕಾಗಿ ನಡೆಸುವ ಗುಸು-ಗುಸು ಇವೆಲ್ಲವೂ ಸಂತ್ರಸ್ಥೆಯನ್ನು ಹೈರಾಣಾಗಿಸಿಬಿಡುತ್ತದೆ.
ಒಂದೊಮ್ಮೆ ಅತ್ಯಾಚಾರಗೈದ ಧೂರ್ತರು ಪ್ರಭಾವಿಗಳಾಗಿದ್ದರಂತೂ ಸಂತ್ರಸ್ಥೆಗೆ ನ್ಯಾಯ ದೊರೆಯುವುದಿರಲಿ, ಆಕೆಯ ಜೀವ ಉಳಿದುಕೊಂಡರೆ ಅದುವೇ ದೊಡ್ಡ ಸಂಗತಿ. ಬಹುತೇಕ ಪ್ರಕರಣಗಳಲ್ಲಿ ಆರೋಪಿ ಜಾಮೀನು ಪಡೆದು ಹೊರಬಂದಿರುತ್ತಾನೆ. ತನ್ನ ಬಳಿ ಇರುವ ಹಣ-ಜಾತಿ-ಧರ್ಮ-ಪ್ರಭಾವದ ಬಲವನ್ನು ಬಳಸಿಕೊಂಡು ಅತ್ಯಾಚಾರದಂತಹ ಆಪಾದನೆಯನ್ನೇ ಬಡಿದು ಹಾಕಿರುತ್ತಾನೆ.
ಇಂತಹ ವಿಷಮ ಪರಿಸ್ಥಿತಿ ದೇಶಾದ್ಯಂತ ಇರುವಾಗ ಕರ್ನಾಟಕ ಹೈಕೋರ್ಟಿನ ನ್ಯಾ. ರವಿ ಮಳಿಮಠ ಮತ್ತು ನ್ಯಾ. ಎಚ್.ಪಿ. ಸಂದೇಶ್ ಅವರ ವಿಭಾಗೀಯ ಪೀಠ ಮತ್ತು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಡಿ.ಎನ್. ಪಟೇಲ್ ಅವರುಗಳು ನೀಡಿರುವ ತೀರ್ಪು ನಿಜಕ್ಕೂ ಸ್ವಾಗತಾರ್ಹವಾದದ್ದು.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಗೆ `ವೈದ್ಯಕೀಯ ಸಾಕ್ಷ್ಯ’ಕ್ಕಿಂತ, ಕೋರ್ಟಿಗೆ `ವಿಶ್ವಾಸ ಮೂಡಿಸುವ ಸಾಕ್ಷ್ಯ’ ಸಾಕೆಂಬ ತೀರ್ಪು ಮತ್ತು ಅತ್ಯಾಚಾರಿಗೆ ಜಾಮೀನು ನೀಡುವ ಕುರಿತು ನಡೆಯುವ ವಿಚಾರಣೆ ಸಮಯದಲ್ಲಿ ಸಂತ್ರಸ್ಥೆ ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಇರಬೇಕೆಂದು ನೀಡಿರುವ ತೀರ್ಪು ಸಂತ್ರಸ್ಥರ ಪಾಲಿಗೆ ನೆಮ್ಮದಿಯ ಉಸಿರುಬಿಡುವಂತಾಗಿದೆ. ಇದರಿಂದಾಗಿ ಸಂತ್ರಸ್ಥರು ತಮ್ಮ ಪ್ರಕರಣದಲ್ಲಿ ವಾದಿಸಲು, ಹೋರಾಟ ಮಾಡಲು ಅವಕಾಶ ಸಿಕ್ಕಂತಾಗಿದೆ. ಅಪರಾಧಿಗಳನ್ನು ಬಂಧನದಲ್ಲಿರುವಂತೆ ನೋಡಿಕೊಳ್ಳುವ ಮೂಲಕ ಜೀವ ಬೆದರಿಕೆಗಳಿಂದಲೂ ತಪ್ಪಿಸಿಕೊಳ್ಳಬಹುದಾಗಿದೆ.

ಲೈಂಗಿಕ ಕ್ರಿಯೆ, ದೌರ್ಜನ್ಯದ ಪ್ರಕರಣಗಳಲ್ಲಿ ವೈದ್ಯಕೀಯ ದೃಢೀಕರಣ ಅಗತ್ಯವಿಲ್ಲ. ಸಂತ್ರಸ್ಥೆಯ ಸಾಕ್ಷ್ಯ ನ್ಯಾಯಾಲಯದ ವಿಶ್ವಾಸವನ್ನು ಪ್ರೇರೇಪಿಸುವಂತಿರಬೇಕು. ಆಗ ಕೋರ್ಟು ಸಂತ್ರಸ್ಥೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಂಬ ತೀರ್ಮಾನಕ್ಕೆ ಬರಬಹುದಾಗಿದೆ. ಹಾಗೆಯೇ ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗೆ ಪ್ರಯತ್ನಿಸುವ ಪೂರ್ವದಲ್ಲಿಯೇ ಆಪಾದಿತನಿಗೆ ಸಂಪೂರ್ಣ ಅರಿವನ್ನು ತನಿಖಾಧಿಕಾರಿ ಮೂಡಿಸಿರಬೇಕು. ಇಲ್ಲಿ ಸಂತ್ರಸ್ಥರ ಬದುಕು ಮತ್ತೊಮ್ಮೆ ಆತಂಕದಲ್ಲಿ ಸಿಲುಕಿಕೊಳ್ಳಬಾರದೆಂಬುದು ನ್ಯಾಯಾಲಯದ ಆಶಯವಾಗಿದೆ. 2018ರ ಅಪರಾಧಿಕ ಕಾನೂನು ವ್ಯವಸ್ಥೆ ಸೆಕ್ಷನ್ 439ರಂತೆ ಮರು ವ್ಯಾಖ್ಯಾನಗೊಳಿಸಲಾಗಿದೆ. ಇದರಂತೆ, ಆಪಾದಿತನಿಂದ ಜಾಮೀನಿನ ಅರ್ಜಿ ಸ್ವೀಕರಿಸಿ 15 ದಿನದೊಳಗೆ ಸಾರ್ವಜನಿಕ ಅಭಿಯೋಜಕರಿಗೆ ತಿಳಿಸಬೇಕು. ಇದಲ್ಲದೆ, ವಿಚಾರಣೆ ಸಮಯದಲ್ಲಿ ಸಂತ್ರಸ್ಥೆ ಮತ್ತು ಅವರನ್ನು ಪ್ರತಿನಿಧಿಸುವ ವಕೀಲರು ಕಡ್ಡಾಯವಾಗಿ ಹಾಜರಿರಬೇಕು. ಇವರುಗಳಿಗೆ ಅಸ್ತಿತ್ವದಲ್ಲಿರುವ ಹಕ್ಕುಗಳ ಬಗ್ಗೆಯೂ ತಿಳಿಸಿಕೊಟ್ಟಿರಬೇಕು.
ಅಯ್ಯೋ! ಇದೇನಿದು ಅತ್ಯಾಚಾರಕ್ಕೆ ಒಳಗಾದವರ ಬಗ್ಗೆ ಇಷ್ಟೊಂದು ಅತಿಯಾದ ಕಕ್ಕುಲಾತಿ ತೋರುತ್ತಿದ್ದಾನೆಂದು ನಿಮಗನಿಸಿರಬಹುದು. ಇಷ್ಟೆಲ್ಲಾ ಬರೆಯಬೇಕಿತ್ತೆ ಎಂದೂ ಅನಿಸಬಹುದು. ಹೌದು ಇಷ್ಟೊಂದು ಸುದೀರ್ಘವಾಗಿ ಬರೆಯಲು ಕಾರಣ ಕೇಂದ್ರ ಸರ್ಕಾರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ. ಚಿಕ್ಕಮಗಳೂರಿನ ಎನ್.ಆರ್. ಪುರ ನಿವಾಸಿ ಎಸ್. ರಾಜು. ರಾಜು ಪ್ರಕರಣದ ವಿವರ ಹೇಳಿರುವೆ. ಇನ್ನು ಸ್ವಾಮಿ ಚಿನ್ಮಯಾನಂದ ಭಾರತ ಸರ್ಕಾರದ ಮಾಜಿ ಕೇಂದ್ರ ಮಂತ್ರಿ, ಭಾಜಪದ ಪ್ರಭಾವಿ ಮುಖಂಡ. ಇವರು ತನ್ನದೇ ಕಾಲೇಜಿನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಒಂದು ವರ್ಷದ ಕಾಲ ಅತ್ಯಾಚಾರ ಎಸಗಿದ್ದರು. ಈ ಸಂಬಂಧ 43 ವೀಡಿಯೋ ತುಣುಕುಗಳನ್ನು ನೀಡಿದ್ದರೂ ಸ್ವಾಮಿ ಚಿನ್ಮಯಾನಂದನ ವಿರುದ್ಧ ದಾವೆ ಹೂಡಿ, ಬಂಧಿಸಲು ಪೋಲೀಸರು ವಿಳಂಬ ಮಾಡಿದ್ದರು. ಆಗ ವಿದ್ಯಾರ್ಥಿನಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಬಹಿರಂಗ ಪತ್ರ ಬರೆದು ಕ್ರಮ ಜರುಗಿಸಲು ಮನವಿ ಮಾಡಿಕೊಂಡರು. ಆಗ ಸ್ವಾಮಿ ಚಿನ್ಮಯಾನಂದನ ವಿರುದ್ಧ ಸೆಕ್ಷನ್ 376ರ ಬದಲು 376ಸಿ ಅಡಿ ಪ್ರಕರಣ ದಾಖಲಿಸಿದರು. ಹಾಗೆಯೇ ಸಂತ್ರಸ್ಥೆ ವಿದ್ಯಾರ್ಥಿನಿ ವಿರುದ್ಧ ರೂ. 5 ಕೋಟಿ ಸುಲಿಗೆಗೆ ಪ್ರಯತ್ನಿಸಿದ್ದರೆಂದು ಪ್ರಕರಣ ದಾಖಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಆದರೆ, ಆರೋಪಿ ಸ್ವಾಮಿ ಚಿನ್ಮಯಾನಂದ ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದನು. ಇದು ಅತ್ಯಾಚಾರ ಪ್ರಕರಣವನ್ನೇ ಮುಳುಗಿಸುವ ಪ್ರಯತ್ನ. ಅಲ್ಲದೆ, ಸಂತ್ರಸ್ಥೆ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರುವ ಪ್ರಯತ್ನವೂ ಇದಾಗಿದೆ. ಆರೋಪಿ ಮಾಜಿ ಕೇಂದ್ರ ಸಚಿವನಾದರೂ, ಭಾಜಪ ಸದಸ್ಯರಲ್ಲ ಎಂದು ಪಕ್ಷದ ವಕ್ತಾರ ಹರಿಶ್ಚಂದ್ರ ಶ್ರೀವಾಸ್ತವ್ ಹೇಳಿರುವುದು ಪ್ರಕರಣ ಎತ್ತ ಸಾಗುತ್ತದೆ ಎಂಬುದನ್ನು ಹೇಳುತ್ತದೆ.
ಇಂತಹದ್ದೊಂದು ಪ್ರಕರಣ ಉನ್ನಾವ್ ಪ್ರಕರಣದ ನೆರಳಿನಿಲ್ಲಿಯೇ ಹೊರ ಬಂದಿದೆ. ಉನ್ನಾವ್ ಪ್ರಕರಣದಲ್ಲಿಯೂ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ಒಂದು ವರ್ಷ ಕಾದಾಡಿ, ನ್ಯಾಯ ಸಿಗದಾಗ ಮುಖ್ಯಮಂತ್ರಿ ಮನೆಯ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದಕ್ಕೂ ಮುನ್ನ ಈಕೆಯ ಪರ ಸಾಕ್ಷ್ಯ ಹೇಳಿದ್ದ ನಾಲ್ಕು ಜನ ಕುಟುಂಬದ ಸದಸ್ಯರನ್ನು ಕೊಲ್ಲಿಸಲಾಗಿತ್ತು. ಮೃತಪಟ್ಟವರಲ್ಲಿ ಸಂತ್ರಸ್ಥೆಯ ತಂದೆಯೂ ಸೇರಿದ್ದರು. ಇದಕ್ಕಾಗಿಯೇ ಶಾಸಕ ಕುಲದೀಪ್ ಸೆಂಗರ್‍ನನ್ನು ಬಂಧನಕ್ಕೊಳಪಡಿಸಲಾಯಿತು. ಇವೆರಡು ಪ್ರಕರಣದೊಂದಿಗೆ ನನ್ನನ್ನು ಎಡೆಬಿಡದೆ ಕಾಡುತ್ತಿರುವ `ಅಸೀಫಾ’ಳ ಸ್ವಗತ ಪ್ರಕರಣವನ್ನು ಮುಂದೆ ಬರೆಯುವೆ. ಇರಲಿ, ನಮ್ಮಲ್ಲಿರುವ ಕಾನೂನು ಸುವ್ಯವಸ್ಥೆಯೊಳಗಿನ ಲೋಪದೋಷದ ಲಾಭ ಪಡೆದು ಮಾಜಿ ಕೇಂದ್ರ ಮಂತ್ರಿ ಸ್ವಾಮಿ ಚಿನ್ಮಯಾನಂದ ಮತ್ತು ಶಾಸಕ ಕುಲದೀಪ್ ಸೆಂಗರ್‍ನಂತಹವರು ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿದೆ.
ಹಾಗಾದರೆ ನಮ್ಮದು ಗಣರಾಜ್ಯವೇ? ಇಲ್ಲಿ ಜನಿಸುವ ಮಹಿಳೆಯರು-ಪುರುಷರು ಭಾರತಾಂಬೆಯ ಮಕ್ಕಳಲ್ಲವೆ? ಇಲ್ಲಿ ಅತ್ಯಾಚಾರವನ್ನು ಸಾರ್ವಜನಿಕಗೊಳಿಸಲಾಗಿದೆಯೇ? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ನನ್ನ ಮನಸ್ಸನ್ನು ಕಾಡಿ, ಕಾಡಿ ಕದಲಿಸಿಬಿಟ್ಟಿದೆ. ಹೀಗಾಗಿ ನೀವಿದನ್ನು ಸಂದೇಹವಾಗಿ ಓದುವ ಬದಲು ಎಚ್ಚರಿಕೆ ಘಂಟೆಯನ್ನಾಗಿ ಪರಿಗಣಿಸಿ, ದೇಶದ ಹೆಣ್ಣುಮಕ್ಕಳ ಪರ ನಿಲ್ಲಬೇಕೆಂಬುದು ನನ್ನ ಆಶಯವಾಗಿದೆ.
ಇಂದಿನ ಸಾಮಾಜಿಕ ಮಾಧ್ಯಮ ಎಂಬ ಉಗ್ರವಾದ ವಿಕೃತ ಜಗತ್ತಿನಲ್ಲಿ `ಅತ್ಯಾಚಾರ’, `ಹತ್ಯಾಚಾರ’ ಎಂಬುದು ಕೂಡ ರಾಜಕೀಯ ಬಣ್ಣ ಪಡೆದುಕೊಳ್ಳುತ್ತದೆ. ಫೇಸ್‍ಬುಕ್, ವ್ಯಾಟ್ಸ್‍ಆಪ್, ಇಮೇಲ್ ಸಂದೇಶಗಳಲ್ಲಿ ಸಹ `ಅತ್ಯಾಚಾರ’, `ಹತ್ಯಾಚಾರ’ ಎಂಬ ಮನುಕುಲದ ಪಿಡುಗು ಕಾಡುತ್ತಿದೆ. ಇವುಗಳಿಂದ ಉಂಟಾಗುವ ಹಿಂಸೆ ಮತ್ತು ದಾಳಿಯನ್ನು ತಡೆಯುವುದು ಅಸಾಧ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.
`ಅತ್ಯಾಚಾರ’, `ಹತ್ಯಾಚಾರ’ ಎಂಬುದು ಅತ್ಯಂತ ಹೇಯವಾದ ಅಪರಾಧ. ಇದು ನಾವು ಊಹಿಸುವುದಕ್ಕಿಂತ ಹೆಚ್ಚು ದಿಗ್ಭ್ರಮೆಗೆ ದೂಡುತ್ತದೆ. ಮಾಧ್ಯಮಗಳಲ್ಲಿ ಪಾಪಿಗಳ ಕಪಿಮುಷ್ಠಿಗೆ ಸಿಲುಕಿದ ಮಗುವನ್ನು ಕಂಡಾಗ ಯಾತನೆಯಾಗುತ್ತದೆ. ಹಾಲುಗಲ್ಲದ ಹಸುಳೆಯ ಮೇಲೆ ಇಷ್ಟೊಂದು ಬರ್ಬರವಾಗಿ ದುಷ್ಕøತ್ಯ ಎಸಗಲು ಅದ್ಹೇಗೆ ಮನಸ್ಸು ಬಂತೆಂಬ ಪ್ರಶ್ನೆ ಕಾಡುತ್ತದೆ. ಸಮಾಜದಲ್ಲಿಂದು ಜನ ಎದುರಿಸುತ್ತಿರುವ ದೌರ್ಜನ್ಯಗಳನ್ನು ಹೋಲಿಕೆ ಮಾಡಿ ನೋಡುವುದು ಸೂಕ್ತವಲ್ಲ. ಆದರೆ ಅಪರಾಧಗಳ ಪುನರಾವರ್ತನೆ ಭೀತಿಯನ್ನುಂಟುಮಾಡುತ್ತದೆ.
ಇದೇ ವರ್ಷ ಮಾರ್ಚ್-ಏಪ್ರಿಲ್ ಇರಬಹುದು. ಗೋವಾದ ಬೈನಾ-ವಾಸ್ಕೋದಲ್ಲಿ 8 ಜನ ಶಾಲಾಬಾಲಕಿಯರನ್ನು ಅಪಹರಿಸಿ, ಕಿರುಕುಳ ನೀಡಿದ, ಹಲ್ಲೆ ನಡೆಸಿದ ಆರೋಪದಡಿ 65 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಲಾಗಿತ್ತು. ಕ್ರೂರ ವ್ಯಂಗ್ಯ ಎಂದರೆ, 8 ಜನ ಶಾಲಾಬಾಲಕಿಯರು 11ರಿಂದ 12 ವರ್ಷದ ವಯೋಮಾನಕ್ಕೆ ಸೇರಿದವರಾಗಿದ್ದರು. ಇನ್ನೂ ದೂರಂತ ಎಂದರೆ, ಈ 8 ಜನ ಶಾಲಾಬಾಲಕಿಯರನ್ನು ಆಪಾದಿತ ಮಹಿಳೆಯೇ ದತ್ತು ಪಡೆದಿದ್ದರು. ಶಾಲೆಯ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಇವರುಗಳು ಮೈ-ಕೈ ಮೇಲೆ ಆಗಿರುವ ಗಾಯವನ್ನು ಇವರ ಸಹಪಾಠಿಗಳೇ ಬೆಳಕಿಗೆ ತಂದರು. ಇಲ್ಲಿ ದತ್ತು ಪಡೆದಿರುವುದು ಕಾನೂನುಬದ್ಧ ಎಂದು ಪರಿಶೀಲಿಸುವುದಕ್ಕಿಂತ ಮುಂಚಿತವಾಗಿ ಬಾಲಕಿಯರನ್ನೇಕೆ ಹಿಂಸಿಸಲಾಗಿದೆ ಎಂಬುದು ತನಿಖೆಯಾಗಬೇಕಿತ್ತು. ನಮ್ಮ ದೇಶವನ್ನು ಕಾಡುತ್ತಿರುವ `ಮಾನವ ಮಾರಾಟ’ಕ್ಕಾಗಿಯೇ ಈ 8 ಜನ ಬಾಲಕಿಯರನ್ನು ದತ್ತು ತೆಗೆದುಕೊಳ್ಳಲಾಗಿದೆಯೇ ಎಂಬುದರ ಕುರಿತು ತನಿಖೆ ಆದಂತಿಲ್ಲ.
ಈ ಪ್ರಕರಣ ಕೂಡ ಎಂದಿನಂತೆ ಮಾಧ್ಯಮಕ್ಕೆ ಆಹಾರ ಆಯಿತು. ಪ್ರಚಾರ ಬಯಸುವವರು ಪ್ರತಿಭಟಿಸಿ ಉದ್ದುದ್ದ ಭಾಷಣವನ್ನು ಬಿಗಿದಿದ್ದಾರೆ. ನಮ್ಮನ್ನು ಪ್ರಭಾವಿಸುವ ನಟ-ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ, ಏಕೆ `ಅತ್ಯಾಚಾರ’, `ಹತ್ಯಾಚಾರ’ ನಿಂತಿಲ್ಲ ಎಂಬುದು ನನ್ನನ್ನು ಕಾಡುತ್ತಿದೆ. ಅದರಲ್ಲೂ ಸೂರತ್‍ನ 11 ವರ್ಷದ ಬಾಲಕಿಯ ಮೇಲೆ ನಡೆದ `ಹತ್ಯಾಚಾರ’ ಬೆಚ್ಚಿ ಬೀಳಿಸುತ್ತದೆ. ಈಕೆಯ ದೇಹದ ಮೇಲೆ 86 ಗಾಯದ ಗುರುತುಗಳು ಕಂಡುಬಂದಿದ್ದವು. ಹತ್ಯೆಗೈಯ್ಯುವ ಮುನ್ನ ಒಂದು ವಾರಗಳ ಕಾಲ ಈಕೆಯನ್ನು ಹಿಂಸಿಸಿ, ಬಲಾತ್ಕಾರಗೊಳಿಸಲಾಗಿದೆ ಎಂದು ಶವ ಪರೀಕ್ಷೆ ವರದಿ ತಿಳಿಸಿದೆ. ಬಿಹಾರದ ಪಾಟ್ನಾದಲ್ಲಿ 17 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಒಡಿಶಾದಲ್ಲಿ 4 ವರ್ಷದ ಕಂದಮ್ಮನ ಮೇಲೂ ದಾರುಣವಾಗಿ `ಹತ್ಯಾಚಾರ’ ಎಸಗಲಾಗಿದೆ. ಅಲ್ಜೀರಿಯಾ ದೇಶದ ಮಹಿಳೆಯ ಮೆಲೆ 2016ರಿಂದ 2018ರ ವರೆಗೆ ಅತ್ಯಾಚಾರ ಎಸಗಿದ್ದಾರೆ. 2017ರಲ್ಲಿ ತನ್ನ ದೇಶಕ್ಕೆ ಹಿಂತಿರುಗಿದ್ದ ಸಂತ್ರಸ್ಥೆ 2018ರಲ್ಲಿ ಮತ್ತೆ ಬಂದು ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ನೆಲೆಸಿದ್ದರು. ಸಲ್ಮಿ ಸುಲ್ಮಾಸ್ ಎಂಬಾತ ಸಂತ್ರಸ್ಥೆಗೆ ಮಾದಕ ವಸ್ತು ಮತ್ತು ಮದ್ಯಪಾನ ಮಾಡಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ನೀಲಸಂದ್ರದ ನರೋತ್ತಮ್ ಸರ್ಕಾರ್ ಎಂಬಾತ 22 ವರ್ಷದ ಮಾನಸಿಕ ಅಸ್ವಸ್ಥೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಕೂಚುವೆಲ್ಲಿ-ಮೈಸೂರು ಎಕ್ಸ್‍ಪ್ರೆಸ್ ರೈಲಿನಲ್ಲಿ ನವೆಂಬರ್ 5ರಂದು ಮಹಿಳೆಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕರುಕುಳ ಕೊಟ್ಟಿದ್ದಾನೆ. ರೈಲಿನ ಚೈನು ಎಳೆದು ನಿಲ್ಲಿಸಿ ಪ್ರಕರಣವನ್ನು ಬೆಂಗಳೂರಿಗೆ ಬಂದು ದಾಖಲಿಸಿದ್ದಾರೆ.
ಕನ್ನಡ ಸಿನಿಮಾವೊಂದರ ಚಿತ್ರೀಕರಣದ ವೇಳೆ ಪರಿಚಯವಾದ ಯುವತಿಯೊಬ್ಬರ ಸಲುಗೆ ಬೆಳೆಸಿ, ಅವರ ಮನೆಗೆ ಹೋಗಿ ಸ್ನಾನದ ಕೋಣೆಯಲ್ಲಿ ಸೂರಜ್ ಗೌಡ ಅಲಿಯಾಸ್ ಶಿವು ಪಾಟಿಲ್ ಕ್ಯಾಮೆರಾ ಅಳವಡಿಸಿ, ನಗ್ನ ದೃಶ್ಯ ತೋರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಮಹಾರಾಷ್ಟ್ರದ ಪುಣೆಯ ಕೆಫೆ ಶಾಪ್‍ನ ಶೌಚಾಲಯದಲ್ಲಿ ಗೌಪ್ಯವಾಗಿ ಕ್ಯಾಮೆರಾ ಅಳವಡಿಸಿ, ಗೌಪ್ಯವಾಗಿ ಚಿತ್ರಗಳನ್ನು ಸೆರೆಹಿಡಿದಿರುವುದು ತನಿಖೆಯಿಂದಷ್ಟೆ ಹೊರ ತರಬೇಕಿದೆ.

ಇವೆಲ್ಲವನ್ನೂ ಗಮನಿಸಿದಾಗ ನಮ್ಮ ದೇಶ ಹೆಣ್ಣುಮಕ್ಕಳ ಪಾಲಿಗೆ ಅಪಾಯಕಾರಿಯಾಗಿದೆ. ಹೆಣ್ಣನ್ನು ಪೂಜಿಸುವ, ಗೌರವಿಸುವ ನಮ್ಮ ದೇಶ ಹೆಣ್ಣನ ಪಾಲಿಗಿಂದು ಕೊಲೆಪಾತಕವಾಗಿಬಿಟ್ಟಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಜರುಗುತ್ತಿರುವ `ಅತ್ಯಾಚಾರ’, `ಹತ್ಯಾಚಾರ’ ಪ್ರಕರಣಗಳನ್ನು ಕಂಡಾಗ ಬೆಚ್ಚಿಬೀಳಬೇಕಾಗುತ್ತದೆ. ಉದಾಹರಣೆಗೆ, ಉತ್ತರ ಪ್ರದೇಶದ ಘೋರಕ್‍ಪುರ ಕ್ಷೇತ್ರದ ಖುಷಿ ನಗರದಲ್ಲಿ ಕಳೆದ ವರ್ಷ ಜೂನ್ 7ರಂದು 12 ವರ್ಷದ ಬಾಲಕಿಯನ್ನು 6 ಜನ ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ಕಾರಣ, ಮನೆ ಮೋರಿ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಕ್ಕೆ ತೆಗೆದುಕೊಂಡ ಸೇಡಿನ ಕ್ರಮ ಇದಾಗಿದೆ. ಜೂನ್ 8ರಂದು ಹಮೀರ್‍ಪುರ್ ಸ್ಮಶಾನದ ಬಳಿ 10 ವರ್ಷದ ಬಾಲಕಿಯ ಮೇಲೆ `ಅತ್ಯಾಚಾರ’ ಎಸಗಲಾಗಿದೆ. ಖಾನ್‍ಪುರಕ್ಕೆ ಹೊಂದಿಕೊಂಡಂತಿರುವ ಜತೌನ್ ಜಿಲ್ಲೆಯಲ್ಲಿ ಜೂನ್ 9ರಂದು ನೆರೆಮನೆಯವರ ಮೇಲೆ ಪ್ರತೀಕಾರ ತೆಗೆದುಕೊಳ್ಳಲು 7 ವರ್ಷದ ಬಾಲಕಿಯ ಮೇಲೆ `ಅತ್ಯಾಚಾರ’ ಮಾಡಲಾಗಿದೆ. ಇದೇ ದಿನ ಜಬಲ್‍ಪುರ ಗ್ರಾಮದಲ್ಲಿ 16 ವರ್ಷದ ಕಿಡಿಗೇಡಿಯೊಬ್ಬ 4 ವರ್ಷದ ಹೆಣ್ಣುಮಗುವಿನ ಮೇಲೆ ಲೈಂಗಿಕ ಕಿರುಕುಳ ಕೊಟ್ಟಿದ್ದ. ಸಂತ್ರಸ್ಥ ಕುಟುಂಬವರ್ಗಕ್ಕೆ ಸಾಂತ್ವನ ಹೇಳಲು ಸಂಸತ್ ಸದಸ್ಯೆ ಪ್ರಗ್ನಾ ಸಿಂಗ್ ಠಾಕೂರ್ ಭೇಟಿಕೊಟ್ಟಿದ್ದರು. ಇವರಿಗೆ ಗೊತ್ತಿಲ್ಲ ಮಹಿಳೆಯರ ಮೇಲಿನ ಅಪರಾಧಗಳಿಗೆ ಮಧ್ಯಪ್ರದೇಶ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಚೆನ್ನೈನಲ್ಲಿ ಟೆಕ್ಕಿ ರಾಜ್ ಜೈಝೀನ್ ಅಲಿಯಾಸ್ ಪ್ರದೀಪ್ ಎಂಬಾತ ತಾನು ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಎಂದು, ಪಂಚತಾರಾ ಹೋಟೆಲ್‍ಗಳಲ್ಲಿ ನೌಕರಿ ಕೊಡಿಸುವುದಾಗಿ ಆಫರ್ ನೀಡಿ 600 ಜನ ಮಹಿಳೆಯರ ಅರೆನಗ್ನ ಫೋಟೋ, ವೀಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ದಾವಣಗೆರೆ ಜಿಲ್ಲೆಯ ಹೊನ್ನೊರಿನ ಮಹಿಳೆಯೊಬ್ಬರಿಗೆ, ಒಂದು ದಿನ ನಾನು ಹೇಳಿದಂತೆ ಕೇಳಿದರೆ ನಿಮ್ಮ ಕೆಲಸ ಮಾಡಿಕೊಡುವೆ ಎಂದು ಪಿಡಿಒ ನಾಗರಾಜ್ ಹೇಳಿದ್ದಾನೆ. ಅಮಾನತ್ತುಗೊಳ್ಳಬೇಕಾದ ಪಿಡಿಒ ನಾಗರಾಜ್ ವಶಿಲಿಬಾಜಿ ಮಾಡಿ ಸೇವೆಯಲ್ಲಿ ಉಳಿದುಕೊಂಡಿದ್ದಾನೆ. ಬಹಳ ದಿನ ಮದುವೆ ಕೂಡಿಬಂದಿಲ್ಲವೆಂದು ಮನೋಜ್ ಜಾನಿ ಎಂಬ ಹುಸಿ ಜ್ಯೋತಿಷಿ ಬಳಿ ಹೋದ ಮಹಿಳೆಗೆ ವಿಭೂತಿ ತಿನ್ನಿಸಿ ಅತ್ಯಾಚಾರ ಎಸಗಲಾಗಿದೆ. ತಾನು ಶಾಸಕರೊಬ್ಬರ ಮಗ, ತಮಗೆ ಹೋಟೆಲ್ ಉದ್ಯಮ ಇದೆ, ಇಲ್ಲಿ ಕೆಲಸ ಕೊಡಿಸುವುದಾಗಿ ಜಹಾಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಎಂಬಾತ ಮಾರತ್‍ಹಳ್ಳಿಯ ಹೊರ ವರ್ತುಲ ರಸ್ತೆಯ ಹೋಟೆಲ್ ಒಂದಕ್ಕೆ ಕರೆದೊಯ್ದು ಪಿಸ್ತೂಲ್ ತೋರಿಸಿ 26 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯುವತಿ ತಪ್ಪಿಸಿಕೊಂಡು ಹೊರ ಬಂದು ದೂರು ನೀಡಿದ್ದಾರೆ. ಪ್ರಕರಣ ಹಲಸೂಲು ಠಾಣೆಯಲ್ಲಿ ದಾಖಲಾಗಿದೆ. ಖಾಸಗಿ ಆಸ್ಪತ್ರೆಯ ವೈದ್ಯ ಶ್ರೀಧರ್ ಶ್ರೀನಿವಾಸನ್, ಸಹೋದ್ಯೋಗಿ ವೈದ್ಯೆಯನ್ನು ಮೆಡಿಸನ್ ವಿಚಾರವಾಗಿ ಚರ್ಚಿಸಬೇಕೆಂದು ಮನೆಗೆ ಕರೆದು ಮದ್ಯ ಕುಡಿಸಿ, ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದೇ ರೀತಿ ಮಂಜುನಾಥನಗರದಲ್ಲಿ ಮನೋಹರ್ ಎಂಬಾತ ಮೋಹನ್ ಮತ್ತು ನಿರ್ಮಲಾ ಅವರ ಸೊಸೆಯ ಮೇಲೆ ಕಣ್ಣು ಹಾಕಿ, ಕಿರುಕುಳ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆ. ಆತ್ಮಹತ್ಯೆಗೂ ಮುಂಚೆ ಮೋಹನ್ ಮತ್ತು ನಿರ್ಮಲಾ ಮನೋಹರ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರು ಕಾರ್ಯಕ್ರಮಗಳನ್ನು ನೀಡದೆ, ಜೀವಬೆದರಿಕೆ ಹಾಕುತ್ತಿದ್ದಾನೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸಿ.ಟಿ. ರವಿ ಗಮನಕ್ಕೆ ತಂದಿದ್ದರು. ಆದರೂ ದತ್ತಪ್ಪ ಸಾಗನೂರು ಕಿರುಕುಳ ಮುಂದುವರೆದಿದ್ದರಿಂದ ಯಾದಗಿರಿಯ ಹಗಲುವೇಷಗಾರ ಕಲಾವಿದ, ಬುಡ್ಗ ಜಂಗಮ ಕಾಲೋನಿಯ ನಿವಾಸಿ ಶಂಕರಶಾಸ್ತ್ರಿ ಪುತ್ರಿ ಭವಾನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಲಂಡನ್ ಮೂಲದ ಥ್ಯಾಮ್ಸನ್ ರಾಯಿಟರ್ಸ್ ಫೌಂಡಶನ್ ಎಂಬ ಸಂಸ್ಥೆ ಕಳೆದ ವರ್ಷ ನೀಡಿರುವ ವರದಿ ಬಾಲಕಿಯರ ಪಾಲಿಗೆ ಭಾರತ ಸುರಕ್ಷಿತವಲ್ಲ ಎಂಬುದನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಅದರಲ್ಲೂ ಅಫಘಾನಿಸ್ತಾನ, ಸಿರಿಯಾ, ಸೋಮಾಲಿಯಾ, ಸೌದಿ ಅರೇಬಿಯಾ, ಪಾಕಿಸ್ತಾನಕ್ಕಿಂತಲೂ ಹೆಣ್ಣುಮಕ್ಕಳ ವಿಚಾರದಲ್ಲಿ ಅತ್ಯಂತ ಕ್ರೂರವಾಗಿದೆ. ವರದಿಯ ಪ್ರಕಾರ ಸಮೀಕ್ಷೆ ಅಂದಾಜಿಸಿರುವ 548 ಜನ ಭಾರತೀಯ ಮೂಲದವರಾಗಿದ್ದಾರೆ. ಭಾರತದಲ್ಲಿ `ಮಹಿಳೆ’ ಪ್ರಮುಖ ಆರು ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಅಪಾಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದರಂತೆ, `ಆರೋಗ್ಯ ರಕ್ಷಣೆ’, `ಆರ್ಥಿಕ ಸಂಪನ್ಮೂಲಗಳ ಪ್ರವೇಶ ಮತ್ತು ತಾರತಮ್ಯ’, `ಸಂಪ್ರದಾಯಕ ಅಭ್ಯಾಸಗಳು’, `ಲೈಂಗಿಕ ಹಿಂಸಾಚಾರ’, `ಲೈಂಗಿಕೇತರ ಹಿಂಸಾಚಾರ’, ಮಾನವ ಸಾಗಾಣಿಕೆಯಂತಹ ಕ್ಷೇತ್ರಗಳಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲು, ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ.
ಇನ್ನೊಂದು ಆಘಾತಕಾರಿ ವಿಚಾರ ಎಂದರೆ, ಮೆಟ್ರೋ ಸಿಟಿ ಸ್ಥಾನಮಾನ ಹೊಂದಿರುವ ನಗರಗಳಲ್ಲಿಯೂ ಮಹಿಳೆಯರು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸುಧಾರಿಸಿಲ್ಲ. ಸಾಮಾಜಿಕವಾಗಿ ಮತ್ತು ಸಾಂಸ್ಕøತಿಕವಾಗಿ ಭಾರತೀಯ ಮನಸ್ಸುಗಳಲ್ಲಿ ಮಹಿಳೆಯರ ಬಗ್ಗೆ ತಿರಸ್ಕಾರ ಮತ್ತು ಕೀಳಾಗಿ ಕಾಣುವ ಮನೋಭಾವ ಬೇರೂರಿದೆ. `ಸಾಮಾಜಿಕ ಬದಲಾವಣೆ’ಯ ವೇಗವೂ ಕುಂಠಿತಗೊಂಡಿದೆ. ಹೆಣ್ಣುಮಗು ಎಂದೊಡನೆ ಹೊರೆ ಎಂದು ಭಾವಿಸುವ ಸಂಪ್ರದಾಯಸ್ಥರ ಸಂಖ್ಯೆಯೂ ಹೆಚ್ಚಿದೆ. `ವರದಕ್ಷಿಣೆ’ ಎಂಬ ಪಿಡುಗು ಕಾನೂನುಬಾಹಿರ. ಆದರೂ ಎಲ್ಲೆಡೆ ಪ್ರಚಲಿತದಲ್ಲಿದೆ. `ಕೌಟುಂಬಿಕ ಹಿಂಸಾಚಾರ’ ದೇಶದ ತುಂಬಾ ಇದೆ. `ಸಾಮಾಜಿಕ ಕಟ್ಟುಪಾಡು’ ಮತ್ತು `ಆರ್ಥಿಕ ಅವಲಂಬನೆ’ಗಾಗಿ ಮಹಿಳಾ ಸಂಕುಲ ಮೌನದಿಂದ ಎಲ್ಲವನ್ನೂ ಸಹಿಸಿಕೊಂಡಿದೆ.