ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಣ, ವಸ್ತು, ಮದ್ಯ ಮತ್ತು ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುವವರ ಮೇಲೆ ಮತ್ತು ಹಂಚುವವರ ಮೇಲೆ ಚುನಾವಣಾ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಕಚ್ಚಾ ಚಿನ್ನ ಹಾಗೂ ವಜ್ರಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದಾವಣಗೆರೆಯ ಲೋಕಿಕೆರೆ ಚೆಕ್ಪೋಸ್ಟ್ ಮೂಲಕ ದಾಖಲೆ ಇಲ್ಲದೆ ಸಾಗಿಸಲು ಯತ್ನಿಸಿದ 12.50 ಕೋಟಿ ರೂ. ಮೌಲ್ಯದ ಚಿನ್ನ, ವಜ್ರವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಈ ಚಿನ್ನ ಮತ್ತು ವಜ್ರವನ್ನು ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಚಿನ್ನ ಮತ್ತು ವಜ್ರ ಸಾಗಣೆಗೆ ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ರಾಮನಗರದ ಹೆಜ್ವಾಲ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ, 10 ಕೆಜಿಯಷ್ಟು ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್ ಗೋಲ್ಡ್ & ಡೈಮಂಡ್ ಕಂಪನಿಗೆ ಸೇರಿದ್ದು ಎನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿದ್ದರಿಂದ ಅಧಿಕಾರಿಗಳು ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆ ತೋರಿಸಿ, ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.










