ಲೋಪದೋಷಗಳಿಂದ ಕೂಡಿದ ರಾಷ್ಟೀಯ ಶಿಕ್ಷಣ ನೀತಿ ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ: ಡಿಕೆಶಿ

33

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ಯುಜಿಸಿ ಮೇಲೆ ಒತ್ತಡ ತಂದು ಅನೇಕ ಲೋಪದೋಷಗಳನ್ನು ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಲು ನಾವೆಲ್ಲರೂ ಸೇರಿ ಒತ್ತಡ ಹೇರಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಡಿಸಿಎಂ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಲೋಪಗಳಿದ್ದವು. ನಮ್ಮ ರಾಜ್ಯ ಸರ್ಕಾರ ಧೈರ್ಯದಿಂದ ಮುನ್ನುಗ್ಗಿ ಒಂದಷ್ಟು ತಿದ್ದುಪಡಿ ಮಾಡುವ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು. ಈ ಸಮ್ಮೇಳನದಿಂದ ಹೊರ ಬರುವ ವಿಚಾರಗಳು ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಶೈಕ್ಷಣಿಕ ಗುಣಮಟ್ಟ ಅತ್ಯುತ್ತಮವಾಗಿದೆ. ನಾವು ಸೌಲಭ್ಯ ಕೊಡುವುದರಲ್ಲೂ ಮುಂದಿದ್ದೇವೆ. ನನಗೆ ನೆನಪಿರುವಂತೆ ಕಳೆದ 30 ವರ್ಷಗಳ ಹಿಂದೆಯೇ ಉತ್ತರ ಭಾರತದ ವಿದ್ಯಾರ್ಥಿಗಳು ದಕ್ಷಿಣ ಭಾರತ ರಾಜ್ಯಗಳಿಗೆ ಉತ್ತಮ ಶಿಕ್ಷಣ ಪಡೆಯುವ ಸಲುವಾಗಿ ವಲಸೆ ಬರುತ್ತಿದ್ದುದ್ದನ್ನು ಗಮನಿಸಿದ್ದೇನೆ ಎಂದು ಹೇಳಿದರು. ಕರ್ನಾಟಕದಲ್ಲಿ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು, 250 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶಗಳು ಹೆಚ್ಚು ಕಾಲೇಜುಗಳನ್ನು ಹೊಂದಿವೆ. ಆದರೆ ನಮ್ಮ ಶಿಕ್ಷಣ ನೀತಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.