ಬೆಂಗಳೂರು: ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚಿಸಿದ ದಂಪತಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ತಿಲಕನಗರ ಸಕ್ಲೇನ್ ಸುಲ್ತಾನ್ ಮತ್ತು ಈತನ ಪತ್ನಿ ನಿಖಿತಾ ಸುಲತಾನ್ ಆರೋಪಿ ಬಂಧಿತರು. ಆರೋಪಿಗಳಿಂದ ಎರಡು ಐಷಾರಾಮಿ ಕಾರು, 2 ದ್ವಿಚಕ್ರ ವಾಹನ, ರೂಪಾಯಿ 66 ಲಕ್ಷ ನಗದು, 24 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ರಾಜಸ್ಥಾನ ಮೂಲಕ ಮಗ್ ಸಿಂಗ್ ನೀಡಿದ ದೂರಿನ ಮೇಲೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಕ್ಲೇನ್ ಸುಲ್ತಾನ್ ಈ ಹಿಂದೆ ನಗರದ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುವಾಗ ವಿದೇಶದ ಜಾಕಿಯೊಬ್ಬನ ಪರಿಚಯವಾಗಿತ್ತು. ಈ ವೇಳೆ ಆತ ವಿದೇಶದಲ್ಲಿ ಹಾರ್ಸ್ ಜಾರಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳನ್ನು ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ರೂಪಾಯಿ 50 ಸಾವಿರ ಕಮಿಷನ್ ನೀಡುವುದಾಗಿ ಹೇಳಿದ್ದ. ಅದರಂತೆ ದಂಪತಿ ವಿದೇಶಗಳಲ್ಲಿ ಹಾರ್ಸ್ ಜಾಕಿಯಾಗಲು ಬಯಸುವವರಿಗೆ ವೀಸಾ ಮಾಡಿಸಿಕೊಡುವುದಾಗಿ ಫೇಸ್‍ಬುಕ್‍ನಲ್ಲಿ ಜಾಹೀರಾತು ನೀಡಿದ್ದರು.
ಅದರಂತೆ ಆರೋಪಿಗಳನ್ನು ಸಂಪರ್ಕಿಸಿದ್ದ ವ್ಯಕ್ತಿಯೊಬ್ಬರಿಗೆ ಆರಂಭದಲ್ಲಿ 2 ವೀಸಾಗಳನ್ನು ಮಾಡಿಸಿಕೊಟ್ಟು ನಂಬಿಕೆ ಗಳಿಸಿದ್ದರು. ನಂತರ ಒಟ್ಟು 51 ಜನರಿಗೆ ವೀಸಾ ಮಾಡಿಸಿಕೊಡುವುದಾಗಿ ಒಟ್ಟು 2.64 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದರು. ಆದರೆ. ವೀಸಾ ಮಾಡಿಸಿಕೊಡದೇ ಆ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಕಡೆಗಳಲ್ಲಿ ಸುತ್ತಾಡಿ ವಿಲಾಸಿ ಜೀವನ ನಡೆಸಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ವೀಸಾ ಕುರಿತು ಕೇಳಿದಾಗ ನಕಲಿ ವೀಸಾ ದಾಖಲೆಗಳನ್ನು ನೀಡಿದ್ದರು. ದಾಖಲೆಗಳು ನಕಲಿ ಎಂಬುದು ತಿಳಿದು, ಈ ಬಗ್ಗೆ ಪ್ರಶ್ನಿಸಲು ಕರೆ ಮಾಡಿದರೆ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ಬೆಂಗಳೂರಿಗೆ ಬಂದು ವಿಳಾಸಕ್ಕೆ ತೆರಳಿ ನೋಡಿದಾಗ ನಕಲಿ ವಿಳಾಸ ಎಂಬುದು ತಿಳಿದಿದೆ. ಹೀಗಾಗಿ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ವಂಚನೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು , ಇಬ್ಬರನ್ನು ಬಂಧಿಸಿದ್ದಾರೆ.










