ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಪಿ ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ…

11
firstsuddi

ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಸಮಯದಲ್ಲೇ ವಿಧಾನಪರಿಷತ್ ಸದಸ್ಯ ಕೆಪಿ ನಂಜುಂಡಿ ರಾಜ್ಯ ಬಿಜೆಪಿಗೆ ಶಾಕ್ ನೀಡಿದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ನಾಳೆ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಹುಬ್ಬಳ್ಳಿ ನಿವಾಸಕ್ಕೆ ಭೇಟಿ ನೀಡಿದ ಕೆ.ಪಿ. ನಂಜುಂಡಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಸಭಾಪತಿ ರಾಜೀನಾಮೆ ಅಂಗೀಕರಿಸಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ. ನಿರ್ಲಕ್ಷ್ಯಕ್ಕೊಳಗಾದ ಕಾಯಕ ಸಮಾಜದ ಏಳಿಗೆಗೆ ರಾಜಕೀಯಕ್ಕೆ ಬಂದೆ. ಕಾಯಕ ಸಮಾಜ ಉಳಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿಗೆ ಬಂದೆ. ಆದರೆ, ಪಕ್ಷದ ಮುಖಂಡರು ಒಂದು ದಿನವೂ ಕಾಯಕ ಸಮಾಜದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮುದಾಯಕ್ಕೆ ಯಾವುದೇ ರೀತಿ ಸ್ಪಂದಿಸಿಲ್ಲ. ನನ್ನನ್ನು ಎಂಎಲ್‌ಸಿ ಮಾಡಿ ಸುಮ್ಮನಾದರು, ಏನೂ ಜವಾಬ್ದಾರಿ ಕೊಡಲಿಲ್ಲ ಎಂದು ಆರೋಪಿಸಿದರು.

ರಾಜೀನಾಮೆ ಕೊಡುವಂತೆ ಎರಡು ವರ್ಷದಿಂದ ನಮ್ಮ ಸಮಾಜದ ಒತ್ತಡವಿತ್ತು. ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ, ನಮ್ಮ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಹೀಗಾಗಿ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ”ಕೆ.ಪಿ. ನಂಜುಂಡಿ ರಾಜೀನಾಮೆ ಅಂಗೀಕರಿಸಿದ್ದೇನೆ. ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಸಭಾಪತಿ ಅವಧಿಯಲ್ಲಿ 13 ಜನ ರಾಜೀನಾಮೆ ಕೊಟ್ಟಿದ್ದಾರೆ. ರಾಜಕೀಯದಲ್ಲಿ ಎಥಿಕ್ಸ್ ಈಗ ಕಡಿಮೆಯಾಗಿದೆ. ದುಡ್ಡು ಕೊಟ್ಟು, ತೆಗೆದುಕೊಂಡು ವೋಟ್ ಹಾಕುವವರೆಗೆ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ. ಹಿಂದೆ ಸಂಗೀತಗಾರರು, ಸಾಹಿತಿಗಳು ಪರಿಷತ್ನಲ್ಲಿ ಇರುತ್ತಿದ್ದರು. ಹಣ, ತೋಳ್ಬಲದ ರಾಜಕೀಯ ನಡೆಯುತ್ತಿದೆ. ಯಾರಿಗೋ ಆಶ್ರಯ ಕಲ್ಪಿಸಲು ಕೆಲಸ ಮಾಡಬೇಕು. ಸಂವಿಧಾನ ದುರುಪಯೋಗ ಆಗಬಾರದು, ಗೌರವಿಸುವ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.