ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವಿನ ಸರಣಿ ಮುಂದುವರಿದಿದೆ. ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಸೆ.11ರಂದು ಈತನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವು ಪ್ರಕರಣ ಹೊರ ಬೀಳುತ್ತಿದ್ದಂತೆಯೇ ನಿನ್ನೆ ಸಂಜೆಯ ವೇಳೆಗೆ ಈ ವಿಚಾರ ಬಹಿರಂಗವಾಗಿದೆ.
ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು. ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್ ಗಳೆಲ್ಲ ಬಂದ್ ಆದವು. ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಕರೆಂಟ್ ಹೋಗಿದೆ ಎಂದರು. ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ಎಂದು ಮೃತ ಬಾಲಕನ ತಾಯಿ ಈರಮ್ಮ ಹೇಳಿದರು.
ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತಪಟ್ಟಿರುವವರ ಸಂಖ್ಯೆ 5 ಕ್ಕೇರಿದಂತಾಗಿದೆ. ಈ ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿ ರಚಿಸಿದ್ದು, ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.










