ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೂ ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ವಿರೋಧಪಕ್ಷಗಳ ಶಾಸಕರನ್ನು ಬಿಜೆಪಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡುವುದಾಗಿ ಆಮಿಷಹೊಡ್ಡುವ ಮೂಲಕ ಶಾಸಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಬಿಜೆಪಿಗೆ ವಿರುದ್ಧವಾಗಿ ಮಾತನಾಡುವವರನ್ನು ಬಂಧಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗಾ ದ್ವೇಷ ಸಾಧಿಸುತ್ತಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿಮೀರಿದೆ. ಇದನ್ನೆಲ್ಲಾ ನೋಡಿಕೊಂಡು ಬಿಜೆಪಿ ಹೈಕಮಾಂಡ್ ಹೇಗೆ ಸುಮ್ಮನಿದೆ ಎಂದು ನನಗೆ ತಿಳಿದಿಲ್ಲ. ಡಿಸಿಎಂ ಅಶ್ವತ್ಥನಾರಾಯಣ ಅವರು ನವಭಾರತ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಮಲ್ಲೇಶ್ವರ ವಿಷಯ ನನಗೂ ಗೊತ್ತಿದೆ. ಬೇಕಿದ್ದರೆ ನನ್ನ ಬಳಿ ಚರ್ಚೆಗೆ ಬರಲಿ ಎಂದು ಹೇಳಿದರು.










