ಮುಂಬೈ: ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನ ಮುರಿದಿದ್ದಾರೆ. ಈ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ.
ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ಇದರೊಂದಿಗೆ 2019ರ ವಿಶ್ವಕಪ್ ಪಂದ್ಯದಲ್ಲಿ ತಮಗಾದ ನೋವಿಗೆ ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್‌ಗಳಲ್ಲಿ 49 ಶತಕಗಳನ್ನು ಸಿಡಿಸಿದ್ದರೆ, ಕೊಹ್ಲಿ ಕೇವಲ 277 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದರು. ಇಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.










