ಲಂಡನ್ : ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಎಡಗೈ ಮೂಳೆ ಮುರಿದು ಹೋಗಿರುವುದರಿಂದ ಅವರಿಗೆ ವಿಶ್ರಾಂತಿಯ ಅವಶ್ಯಕತೆಯಿದ್ದು, ಬಿಸಿಸಿಐ ಧವನ್ ಅವರು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದು, ಭಾರತಕ್ಕೆ ಮರಳಲಿದ್ದಾರೆ. ಈ ಬಗ್ಗೆ ಧವನ್ ಭಾವನಾತ್ಮಕವಾಗಿ ವೀಡಿಯೋ ಮಾಡಿ ತಮ್ಮ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದು, ಟೀಂ ಇಂಡಿಯಾ ಪರವಾಗಿ ವಿಶ್ವಪಕ್ ಪಂದ್ಯದಲ್ಲಿ ಆಡಲು ನಾನು ಇರುವುದಿಲ್ಲ ಎಂಬುವುದನ್ನು ತಿಳಿದು ನನಗೆ ತುಂಬಾ ದುಃಖವಾಗುತ್ತಿದೆ. ದುರಾದೃಷ್ಟವಶಾತ್ ನನ್ನ ಹೆಬ್ಬೆರಳಿನ ಗಾಯದಿಂದಾಗಿ ನನಗೆ ಆಡಲು ಆಗುತ್ತಿಲ್ಲ. ವಿಶ್ವಕಪ್ ಇನ್ನೂ ಮುಗಿದಿಲ್ಲ, ಆಟ ಇನ್ನೂ ಮುಂದುವರಿಯಬೇಕಿದ್ದು, ಗಾಯದಿಂದ ಬಳಲುತ್ತಿರುವ ನನಗೆ ಬೆಂಬಲ ನೀಡುತ್ತಿರುವ ತಂಡದ ಸದಸ್ಯರು ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ನಾನು ಋಣಿಯಾಗಿರುತ್ತೇನೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.










